ಬೆಳಗಾವಿ: ಸರ್ಕಾರ ಎಲ್ಲರಿಗೂ ಕೋವಿಡ್ ಲಸಿಕೆಯನ್ನು ನೀಡುವ ಉದ್ದೇಶದಿಂದ ಶುಕ್ರವಾರ ವಿಶೇಷ ಲಸಿಕಾ ಮೇಳ ಆಯೋಜಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಅಂದು ಒಂದೇ ದಿನ ಮೂರು ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ನೀಡಲಾಗಿದೆ. ಈ ಗುರಿ ಸಾಧನೆ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಲಸಿಕಾ ಮೇಳದ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಜೊತೆ ಇಂದು ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಬೆಳಗಾವಿ ಜಿಲ್ಲೆಗೆ ಅತಿ ಹೆಚ್ಚಿನ ಗುರಿ ನಿಗದಿಪಡಿಸಲಾಗಿದೆ. ಈ ಹಿಂದೆ ನಡೆದಿರುವ ವಿಶೇಷ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಒಂದು ಲಕ್ಷ ಲಸಿಕೆ ನೀಡಿರುವುದು ಇಡೀ ರಾಜ್ಯದ ಗಮನ ಸೆಳೆದಿತ್ತು.
ಈ ಬಾರಿ ಮೂರು ಲಕ್ಷ ಲಸಿಕೆಗಳನ್ನು ನೀಡುವ ಗುರಿ ಸಾಧಿಸಲು ಅಗತ್ಯ ತಂಡಗಳ ರಚನೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಲಸಿಕೆ ನೀಡಬೇಕು. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಲಸಿಕಾ ಕಾರ್ಯಕ್ರಮವನ್ನು ಆರಂಭಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು. ಅದೇ ರೀತಿ ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಹಾಗೂ ನಗರದ ಪ್ರದೇಶಗಳಲ್ಲಿ ವಾರ್ಡ್ ಮಟ್ಟದಲ್ಲಿ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಿ ಲಸಿಕೆ ಪಡೆಯಲು ಜನರಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಬಿಮ್ಸ್, ಕೆ.ಎಲ್.ಇ. ಸೇರಿದಂತೆ ಪ್ರಮುಖ ಆಸ್ಪತ್ರೆಗಳ ನರ್ಸ್ಗಳನ್ನು ಲಸಿಕಾ ಮೇಳಕ್ಕೆ ಪಡೆದುಕೊಳ್ಳಲಾಗುತ್ತಿದೆ. ಅದೇ ರೀತಿ ತಾಲೂಕು ಕೇಂದ್ರಗಳಲ್ಲಿ ಕೂಡ ಖಾಸಗಿ ಆಸ್ಪತ್ರೆಗಳ ಜತೆ ಚರ್ಚೆ ನಡೆಸಿ ನರ್ಸಿಂಗ್ ಸಿಬ್ಬಂದಿ ಸಹಕಾರ ಪಡೆದುಕೊಳ್ಳಬೇಕು. ಲಸಿಕೆ ನೀಡಿದ ಕೂಡಲೇ ಮಾಹಿತಿಯನ್ನು ಎಂಟ್ರಿ ಮಾಡಬೇಕು. ಪಾಲಕರು, ಅಲ್ಪಸಂಖ್ಯಾತ ಸಮುದಾಯದವರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರು ಹಾಗೂ ಅತೀ ಚಿಕ್ಕ ಗ್ರಾಮಗಳ ಜನರಿಗೆ ಮೊಬೈಲ್ ಲಸಿಕಾ ವಾಹನಗಳ ಮೂಲಕ ಲಸಿಕೆ ನೀಡಬೇಕು.
ಇದನ್ನೂ ಓದಿ: ದೇವಸ್ಥಾನ ನೆಲಸಮಗೊಳಿಸುವ ವಿಚಾರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು: ಸಿದ್ದರಾಮಯ್ಯ ನೇರ ಆರೋಪ
ಹೆಚ್ಚಿನ ಪ್ರಚಾರದ ಜತೆಗೆ ಲಸಿಕೆ ನೀಡಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಲಸಿಕೆ ನೀಡಿರುವ ಕುರಿತ ಮಾಹಿತಿಯನ್ನು ತಕ್ಷಣವೇ ಅಪ್‌ಲೋಡ್ ಮಾಡಬೇಕು. ಶಿಕ್ಷಕರನ್ನು ಕೂಡ ಮಾಹಿತಿ ಅಪ್‌ಲೋಡ್ ಮಾಡಲು ಬಳಸಿಕೊಳ್ಳಬೇಕು. ಆರೋಗ್ಯ ಇಲಾಖೆ ಮಾತ್ರವಲ್ಲ, ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಲಸಿಕಾ ಮೇಳದಲ್ಲಿ ಭಾಗವಹಿಸುವ ಮೂಲಕ ಲಸಿಕಾ ಮೇಳವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕು ಎಂದು ನಿರ್ದೇಶನ ನೀಡಿದರು.