ಬೆಳಗಾವಿ: ಪ್ರವಾಹದ ಕುರಿತು ಚರ್ಚೆ ನಡೆಸಲು ತಕ್ಷಣವೇ ಅಧಿವೇಶನ ಕರೆಯಲು ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಆಗಿರುವ ಪ್ರವಾಹದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಶಾಸಕರ ಹತ್ತಿರ ಕೇಳಿ ತಿಳಿದು ಕೊಂಡಿದ್ದೇನೆ. ಹೀಗಾಗಿ, ಸ್ಥಳ ಪರಿಶೀಲನೆ ನಡೆಸಿದ ಮೇಲೆ ಖಚಿತವಾಗಿ ಪರಿಹಾರದ ಕುರಿತು ಹೇಳುತ್ತೇನೆ. ಕಳೆದ 2019ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪರಿಹಾರ ಕೊಡಲಿಲ್ಲ. ಕಳೆದ ಬಾರಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರವಾಹ ಸಂಭವಿಸಿದ್ರೂ ಪ್ರಧಾನಿಯವರು ಪ್ರವಾಹ ವೀಕ್ಷಣೆಗೆ ರಾಜ್ಯಕ್ಕೆ ಬರಲೇ ಇಲ್ಲ.
ನೆರೆ ಪೀಡಿತ ಪ್ರದೇಶಗಳಲ್ಲಿ ಹಾನಿ ಆಗಿರುವ ಬಗ್ಗೆ ಪರಿಶೀಲನೆ ನಡೆಸಲು ಈಗಾಗಲೇ ಕಾಂಗ್ರೆಸ್ ಪಕ್ಷದಿಂದಲೂ ತಂಡಗಳನ್ನು ರಚನೆ ಮಾಡಲಾಗಿದ್ದು, ಅವರು ನೀಡುವ ಎಲ್ಲ ವರದಿಗಳನ್ನು ಸೇರಿಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಾನು ಕೂಡ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹದ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೇನೆ.
ಕಷ್ಟ ಕಾಲದಲ್ಲಿ ಸರ್ಕಾರ ಹೇಗೆ ಪರಿಹಾರ ನೀಡಬೇಕೆಂಬುವುದರ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇವೆ. ಇದಲ್ಲದೇ, ಪ್ರವಾಹದ ಕುರಿತು ಚರ್ಚೆ ನಡೆಸಲು ತಕ್ಷಣವೇ ಅಧಿವೇಶನ ಕರೆಯಲು ಸರ್ಕಾರವನ್ನು ಒತ್ತಾಯ ಮಾಡಲಾಗುವುದು ಎಂದರು.
ತುರ್ತು 200 ಕೋಟಿ ಅನುದಾನ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸಿಎಂ ಅವರನ್ನು ಕೇಳದೇ ನನನ್ನು ಕೇಳಿದ್ರೆ ಹೇಗೆ ಎಂದು ಪ್ರಶ್ನಿಸಿದರು. ಸರ್ಕಾರದಲ್ಲಿ ಅನುದಾನ ಇದ್ದರೆ ಕೊಡೋದು. ಅನಗತ್ಯ ಖರ್ಚುಗಳನ್ನು ನಿಲ್ಲಿಸಿ, ಸರ್ಕಾರ ಎಲ್ಲಿಂದಾದರೂ ತಂದು ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಬೇಕು. ಇದು ಸರ್ಕಾರದ ಮೊದಲ ಆದ್ಯತೆ ಎಂದರು.
ಇದನ್ನೂ ಓದಿ: ಧಾರವಾಡಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಆಗಮನ: ಬಿಗಿ ಪೊಲೀಸ್ ಬಂದೋಬಸ್ತ್