ಬೆಳಗಾವಿ : ನಾಡದ್ರೋಹಿ ಎಂಇಎಸ್ ಪುಂಡರು ಮತ್ತೆ ಬಾಲ ಬಿಚ್ಚಿದ್ದಾರೆ. ಬೆಳಗಾವಿಗೆ ಆಗಮಿಸಿರುವ ಮಹಾರಾಷ್ಟ್ರದ ಮಾಜಿ ಸಿಎಂ ಶರದ್ ಪವಾರ್ ಎದುರು ಪುಂಡಾಟಿಕೆ ಪ್ರದರ್ಶಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಾಡದ್ರೋಹಿ ಘೋಷಣೆ ಕೂಗಿದ ಘಟನೆ ನಡೆಯಿತು.
ಮಹಾರಾಷ್ಟ್ರ ಮಾಜಿ ಸಿಎಂ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಎರಡು ದಿನಗಳ ಕಾಲ ಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗಾವಿಯ ಮರಾಠಾ ಬ್ಯಾಂಕ್‌ನ ಅಮೃತ್ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶರದ್ ಪವಾರ್ ಭಾಷಣ ಆರಂಭವಾಗುತ್ತಿದ್ದಂತೆ ಎಂಇಎಸ್ ಪುಂಡರು, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದರು.
ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗುವ ವೇಳೆ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಸುಮ್ಮನೆ ನಿಂತರು. ನಾಡದ್ರೋಹಿಗಳ ಹಾರಾಟ ಮುಗಿದ ನಂತರ ಭಾಷಣ ಪ್ರಾರಂಭ ಮಾಡಬಹುದಾ ಎಂದು ಎಂಇಎಸ್ ಪುಂಡರನ್ನು ಶರದ್ ಪವಾರ್ ಕೇಳಿ, ನಿಮ್ಮ ಅನುಮತಿ ಪಡೆದು ಭಾಷಣ ಶುರು ಮಾಡುತ್ತಿನಿ ಎಂದು ಹೇಳಿದರು. ಈ ವೇಳೆ ಎಂಇಎಸ್ ಮುಖಂಡ ದೀಪಕ್ ದಳವಿ, ಕೃಷ್ಣ ಮೊಪಸೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಎನ್‌ಸಿಪಿ ಕಾರ್ಯಕರ್ತರಿಂದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮಗೆ ಅಪಮಾನ : ನಗರದ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಕಟ್ಟೆಗೆ ಶೂ ಧರಿಸಿ ಎನ್ಸಿಪಿ ಕಾರ್ಯಕರ್ತರು ಮಾಲಾರ್ಪಣೆ ಮಾಡಿದ ಘಟನೆ ನಡೆಯಿತು. ಬೆಳಗಾವಿ ಪ್ರವಾಸದಲ್ಲಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಚೆನ್ನಮ್ಮ ವೃತ್ತದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ್ದ ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ಬೃಹದಾಕಾರದ ಹೂವಿನ ಹಾರ ತಂದು ಪಟಾಕಿ, ಸಿಡಿಮದ್ದು ಸಿಡಿಸಿ ಅದ್ಧೂರಿ ಸ್ವಾಗತ ಕೋರಲಾಯಿತು.
ಇದನ್ನೂ ಓದಿ: ಬೈಕ್ ಅಪಘಾತದಿಂದ ಕೊಲೆ ಪ್ರಕರಣ ಬೆಳಕಿಗೆ : ಇಬ್ಬರು ಆರೋಪಿಗಳ ಬಂಧನ