ಬೆಳಗಾವಿ: ಲೋಕಸಭೆ ಉಪಚುನಾವಣೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾರಣ ಬಿಚ್ಚಿಟ್ಟಿದ್ದಾರೆ. ಪರೋಕ್ಷವಾಗಿ ಫಿರೋಜ್ ಸೇಠ್ ವಿರುದ್ಧ ಸತೀಶ್ ಜಾರಕಿಹೊಳಿ ಕೆಂಡಾಮಂಡಲರಾಗಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಫಲಿತಾಂಶ ಬಂದು 2 ತಿಂಗಳ ಬಳಿಕ ಮಹಾನಗರ ಪಾಲಿಕೆ ಚುನಾವಣೆ ಸೋಲಿನ ಪರಾಮರ್ಶೆ ಮಾಡಿದ್ದಾರೆ. ಅಂಕಿ-ಅಂಶ ಸಮೇತ 22 ನಿಮಿಷದ ವಿಡಿಯೋ ಹೇಳಿಕೆಯನ್ನು ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿದ್ದಾರೆ. ನಮ್ಮದೇ ಪಕ್ಷದ ಬೆಳಗಾವಿಯ ಒಬ್ಬ ನಾಯಕನ ಕಾರಣದಿಂದ ಚುನಾವಣೆ ಸೋತಿದ್ದೇವೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಫಿರೋಜ್ ಸೇಠ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಸ್ಥಳೀಯ ಮುಖಂಡರಿಂದ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಬೆಳಗಾವಿಯ ನಮ್ಮ ಪಕ್ಷದ ಓರ್ವ ಮುಖಂಡನ ಅಸಹಕಾರವೇ ಇಂದು ಪಕ್ಷ ತಲೆ ತಗ್ಗಿಸಲು ಕಾರಣವಾಗಿದೆ. ಬೆಳಗಾವಿಯ ಈ ವ್ಯಕ್ತಿ ಬೆಳಗಾವಿ ಕಾಂಗ್ರೆಸ್ ತನ್ನ ಮನೆಯಲ್ಲಿ ಇರಬೇಕೆಂಬ ಮೆಂಟಾಲಿಟಿ ಹೊಂದಿದ್ದಾರೆ. ನಾನು ನಂತರ ನನ್ನ ಮಗ ಬಳಿಕ ಮೊಮ್ಮಗ ಆಳಬೇಕೆಂಬ ಮೆಂಟಾಲಿಟಿಯೇ ಇಂದು ಕಾಂಗ್ರೆಸ್‌ಗೆ ಹಿನ್ನಡೆ ಕಾರಣವಾಗಿದೆ.
ಇದನ್ನೂ ಓದಿ: ಮನೆ ಬಾಡಿಗೆ ಕಟ್ಟುವ ಹಣದಲ್ಲಿ ಫ್ಯಾನ್ಸಿ ಆಭರಣ ಖರೀದಿಸಿದ ಗೃಹಿಣಿ.. ದಂಪತಿ ನಡುವಿನ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ
ಬೆಳಗಾವಿ ನಗರದಲ್ಲಿ ಯಾವುದೇ ಲೀಡರ್ ಬೆಳೆಯಲು ಅವಕಾಶ ಇಲ್ಲದಾಗಿದೆ. ಆ ನಿಟ್ಟಿನಲ್ಲಿ ನೇರವಾಗಿ ನಾವೇ ನಗರದಲ್ಲಿ ಸಂಘಟನೆ ಮಾಡಲು ಪ್ರಾರಂಭಿಸಿದ್ದೇವೆ. ಈ ವ್ಯಕ್ತಿಯಿಂದ ನಮಗೆ ಇನ್ಮುಂದೆ ತೊಂದರೆ ತಪ್ಪಿದ್ದಲ್ಲ. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲೂ ನನಗೆ ಗೆಲ್ಲಲು ಎಲ್ಲ ರೀತಿಯ ಅವಕಾಶ ಇತ್ತು. ಆದರೆ ಆ ವ್ಯಕ್ತಿಯ ಅಪಪ್ರಚಾರದಿಂದ ನಮ್ಮ ಕಾರ್ಯಕರ್ತರು ಸ್ಥೈರ್ಯ ಕಳೆದುಕೊಂಡು ಪ್ರಚಾರದಿಂದ ಹಿಂದೆ ಉಳಿದರು. ಅನಾವಶ್ಯಕ ಟೈಮ್ ಪಾಸ್ ಮಾಡಿದ್ದರಿಂದ ಲೋಕಸಭೆ ಉಪಚುನಾವಣೆಯಲ್ಲಿ ಸೋಲಾಯಿತು.
ಪಾಲಿಕೆ ಚುನಾವಣೆಯಲ್ಲಿಯೂ ಅದೇ ವ್ಯಕ್ತಿಯಿಂದ ಬಹಳಷ್ಟು ತೊಂದರೆ ಅನುಭವಿಸಿದ್ದೇವೆ. ಹೀಗಾಗಿ ನಾವು ಬೆಳಗಾವಿ ನಗರ ಸೀಮಿತವಾಗಿ ನಮ್ಮದೇ ಆದ ಸಂಘಟನೆ ಮಾಡಬೇಕು. ಪಕ್ಷಕ್ಕೆ ಮರುಜೀವ ತುಂಬಲು ನಾವು ಪ್ರಯತ್ನ ಮಾಡ್ತಿದ್ದೇವೆ ಎಂದಿದ್ದಾರೆ.