ಬೆಳಗಾವಿ: ಗೋಕಾಕ್ ತಹಶೀಲ್ದಾರ್ ಕಚೇರಿಯಲ್ಲಿ ಯಾವ ಕ್ಲರ್ಕ್ ಕೂಡ ನಮ್ಮ ಮಾತು ಕೇಳಲ್ಲ, ಇಂತಹ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಹೇಗೆ ನನ್ನ ಸಿಎಂ ಮಾಡಲು ಸಾಧ್ಯ. ರಮೇಶ್ ಜಾರಕಿಹೊಳಿಗೆ ಬಿಜೆಪಿ ಹೈಕಮಾಂಡ್ ಮೂಗುದಾರ ಹಾಕಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ನನ್ನ ಮುಖ್ಯಮಂತ್ರಿ ಯಾವಾಗ ಮಾಡುತ್ತಾನೆ. ಯಾವ ಪಾರ್ಟಿಯಿಂದ ಈತ ನನ್ನ ಸಿಎಂ ಮಾಡ್ತಾನೆ, ಇವನಿಗೇನು ಅಧಿಕಾರವಿದೆ. ಒಂದು ಪಕ್ಷದಲ್ಲಿರುವ ಆತ ಬೇರೆ ಪಕ್ಷದಲ್ಲಿರುವ ನನ್ನ ಬಗ್ಗೆ ಹೇಳೋದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ರಮೇಶ್ ಜಾರಕಿಹೊಳಿಗೆ ಅವರ ಪಕ್ಷದವರು ನಿಯಂತ್ರಣ ಮಾಡಬೇಕು, ಬೇರೆ ಪಕ್ಷದಲ್ಲಿದ್ದು ಇನ್ನೊಂದು ಪಕ್ಷದ ವ್ಯಕ್ತಿ ಸಿಎಂ ಆಗ್ತಾನೆ ಅಂದ್ರೆ ಹೇಗೆ?. ರಮೇಶ್ ಇತಿ ಮಿತಿಯಲ್ಲಿ ಮಾತನಾಡಬೇಕು. ಸುಮ್ಮನೆ ಏನೋ ಬಾಯಿಗೆ ಬಂದ ಹಾಗೆ ಮಾತನಾಡೋದಲ್ಲ. ನಮ್ಮ ಪಕ್ಷದಲ್ಲಿ ಇದ್ದುಕೊಂಡು ಹೇಳಿದ್ರೆ ಕೇಳಬಹುದಿತ್ತು. ಬಿಜೆಪಿಯವರು ರಮೇಶ್ ಜಾರಕಿಹೊಳಿಯನ್ನ ನಿಯಂತ್ರಣ ಮಾಡಬೇಕು ಎಂದರು.
20 ವರ್ಷ ಹಿಂದೆಯೂ ರಮೇಶ್ ಕೆಲಸ ಮಾಡಿಲ್ಲ, ಮುಂದೆಯೂ ಕೆಲಸ ಮಾಡಲ್ಲ ಎಂದು ವ್ಯಂಗ್ಯವಾಡಿದರು. ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಇಲಾಖೆ ಸಿಕ್ಕಿದೆ. ನಾಲ್ಕು ರಾಜ್ಯಗಳ ಮಧ್ಯೆ ಜಲ ವಿವಾದಗಳು ಇವೆ. 30 ರಿಂದ 40 ವರ್ಷಗಳಿಂದ ಬಗೆಹರಿದಿಲ್ಲ, ಅದನ್ನು ರಮೇಶ್ ಬೆಳಗಾವಿಯಲ್ಲಿ ಕುಳಿತು ಹೇಗೆ ಬಗೆಹರಿಸುತ್ತಾನೆ, ಕಾದು ನೋಡಬೇಕು ಎಂದರು. ದೆಹಲಿ ಚುನಾವಣಾ ಫಲಿತಾಂಶ ನಿರೀಕ್ಷಿತ, ಸರ್ವೇ ಕೂಡ ಹೇಳಿದ್ದವು. ಕೇಜ್ರಿವಾಲ್ ಒಳ್ಳೆಯ ಕೆಲಸ ಮಾಡಿದ್ದಾರೆ. ಮರಳಿ ಅಧಿಕಾರಕ್ಕೆ ಬರ್ತಾರೆ ಎಂದು ಎಲ್ಲರಿಗೂ ನಿರೀಕ್ಷೆಯಿತ್ತು. ದೆಹಲಿ ಚುನಾವಣೆ ಆಶ್ಚರ್ಯ ಫಲಿತಾಂಶ ಅಲ್ಲ, ನಿರೀಕ್ಷಿತ ಫಲಿತಾಂಶ. ನಾವು ಬದಲಾವಣೆ ಆಗೋ ಕಾಲ ಇದು. ನಮ್ಮ ಅಜೆಂಡಾ, ನಮ್ಮ ಸಂಘಟನೆಯ ಶೈಲಿ ಬದಲಾವಣೆಗೆ ಎಚ್ಚರಿಕೆಯ ಗಂಟೆ. ನಮ್ಮ ಪಕ್ಷದ ಎಲ್ಲಾ ಮುಖಂಡರು ಜನರ ಬಯಕೆಗೆ ಹೆಚ್ಚಿನ ಗಮನ ಕೊಡಬೇಕು. ಒಳ್ಳೆಯ ಕೆಲಸ ಮಾಡಿದರೆ ಜನ ವೋಟ್ ಹಾಕೇ ಹಾಕ್ತಾರೆ. ಅದೇ ಒಂದು ಸಂದೇಶವನ್ನು ದೆಹಲಿ ಮತದಾರರು ಕೊಟ್ಟಿದ್ದಾರೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಕೂಡಿದರೂ ಸಂಖ್ಯಾಬಲದ ಕೊರತೆ ಇದೆ. ಕ್ರಾಸ್ ವೋಟಿಂಗ್ ಆಗುವ ಮಟ್ಟಿಗೆ ಯಾರೂ ಚರ್ಚೆ ಮಾಡಿಲ್ಲ, ಲಾಭಿ ಮಾಡಿಲ್ಲ. ಅಸಮಾಧಾನಿತರು ಪಕ್ಷದಲ್ಲಿ ಇದ್ದೆ ಇರ್ತಾರೆ. ಬಿಜೆಪಿಯ ಅಸಮಾಧಾನಿತ ಶಾಸಕರು ನಮಗೆ ವೋಟ್ ಹಾಕ್ತಾರೆಂಬ ಆಸೆಯಿಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷರು ಮುಂದುವರಿಯಬಹುದು, ಬದಲಾವಣೆಯೂ ಆಗಬಹುದು. ಎರಡೂ ಸಾಧ್ಯತೆ ಇದೆ. ದೆಹಲಿ ಚುನಾವಣೆಯಲ್ಲಿ ಎಲ್ಲರೂ ಬ್ಯೂಸಿ ಇದ್ರು, ಈಗ ಆಗಹುದು. ಪಕ್ಷದಲ್ಲಿ ಗುಂಪುಗಾರಿಕೆಯಿಂದ ವಿಳಂಬವಾಗುತ್ತಿದೆ ಎಂಬುದು ಸುಳ್ಳು. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಿದ್ದಾರೆ, ಅವರ ರಾಜೀನಾಮೆ ಸ್ವೀಕಾರ ಮಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.