ಚಿಕ್ಕೋಡಿ, ಬೆಳಗಾವಿ : ಅಖಿಲ ಭಾರತ ಬ್ರಾಹ್ಮಣ ಸಭಾದವರಿಂದ ನಮ್ಮ ವಾಕ್ ಸ್ವಾತಂತ್ರ ಕಿತ್ತುಕೊಳ್ಳುವ ಹುನ್ನಾರ ನಡೆದಿದೆ ಎಂದು ಚಿತ್ರನಟ ಚೇತನ್ ಅಹಿಂಸಾ ಹೇಳಿದ್ದಾರೆ. ಭೀಮಾ ಕೋರಗಾಂವ್ ವಿಜಯೋತ್ಸವ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಅವರು, ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದಾರೆ.
ಡಾ.ಬಿ.ಆರ್ ಅಂಬೇಡ್ಕರ್ ಜನ ಜಾಗೃತಿ ವೇದಿಕೆ ಹಾಗೂ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್, ಪೆರಿಯಾರ್ ಬ್ರಾಹ್ಮಣ್ಯವನ್ನು ವಿರೋಧ ಮಾಡಿದ್ದಾರೆ. ನಾನು ವಿರೋಧ ಮಾಡಿದ್ದಕ್ಕೆ ನನ್ನನ್ನು ಪೊಲೀಸ್ ಠಾಣೆ ಮೆಟ್ಟಿಲು ಏರಿಸಿದ್ದಾರೆ. ಹಂಸಲೇಖ ಸೇರಿದಂತೆ ಎಲ್ಲರ ವಾಕ್ ಸ್ವಾತಂತ್ರ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದಿದ್ದಾರೆ.
'ಎರಡೂ ಪಕ್ಷ ಪ್ರಜಾಪ್ರಭುತ್ವ ಮುಂದುವರೆಸುತ್ತಿಲ್ಲ'
ಡಿಕೆ ಸುರೇಶ ಹಾಗೂ ಸಚಿವ ಅಶ್ವತ್ಥ್ ನಾರಾಯಣ ಜಟಾಪಟಿ ವಿಚಾರವಾಗಿ ಮಾತನಾಡಿದ ಚೇತನ್ ಅವರು, ವಿಚಾರಗಳ ಚಕಮಕಿ ಇರಬೇಕು. ದೈಹಿಕ ಹಲ್ಲೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ವಿಚಾರಧಾರೆಯಲ್ಲಿ ಸಮಾನತೆಯ ಸಮಾಜದ ಬಗ್ಗೆ ವಿಚಾರ ಮಾಡಬೇಕಿದೆ.
ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಒಂದೇ. ಪ್ರಜಾಪ್ರಭುತ್ವವನ್ನು ಎರಡು ಪಕ್ಷಗಳು ಮುಂದುವರೆಸುತ್ತಿಲ್ಲ. ರಾಜ್ಯದ ಸಿಎಂ ಕಾಮನ್ ಸಿಎಂ ಅಲ್ಲ, ಅವರೊಬ್ಬರು ಕಮ್ಯುನಲ್ ಸಿಎಂ. ಮತಾಂತರ ವಿರೋಧಿ ಕಾಯ್ದೆ ಸಂವಿಧಾನ ವಿರೋಧಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ್ ಹೊಸಮನಿ, ಮಲ್ಲಿಕಾರ್ಜುನ ರಾಶಿಂಗೆ, ಮಲ್ಲೇಶ ಚೌಗಲಾ, ಮಹಾವೀರ ಮೋಹಿತೆ ಸೇರಿ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಡಿಸೈನ್ ವೀರರಿಗೆ ಈಗ ನಮ್ಮ ನೆಲ, ಜಲ ಎನ್ನುವುದು ನೆನಪಿಗೆ ಬಂದಿದೆ: ಡಿಕೆ ಸಹೋದರರಿಗೆ ಹೆಚ್‌ಡಿಕೆ ಡಿಚ್ಚಿ