ಬೆಳಗಾವಿ: ಹೃದಯಾಘಾತದಿಂದ ಅಸುನೀಗಿದ ಪೊಲೀಸ್ ಶ್ವಾನ ನಯನಾಳನ್ನು ನೆನೆದು ನಿವೃತ್ತ ಪೊಲೀಸ್ ಆಯುಕ್ತ ರಾಜಪ್ಪ ಕಂಬನಿ ಮಿಡಿದಿದ್ದಾರೆ.
ಬೆಳಗಾವಿಯ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಹಲವಾರು ಪ್ರಕರಣಗಳನ್ನು ಬೇಧಿಸಲು ಆರಕ್ಷಕರಿಗೆ ನೆರವಾಗಿದ್ದ, 4 ವರ್ಷಗಳ ಕಾಲ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪತ್ತೇದಾರಿಯಾಗಿ ಕಾರ್ಯನಿರ್ವಹಿಸಿದ್ದ ನಯನಾ ಶನಿವಾರ ಇಹಲೋಕ ತ್ಯಜಿಸಿದ್ದಾಳೆ. ತಮ್ಮ ಸೇವಾ ಅವಧಿಯಲ್ಲಿ ನಯನಾ ಮಾಡಿದ ಕೆಲಸವನ್ನು ನೆನೆದು ಬೆಳಗಾವಿ ನಿವೃತ್ತ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ ಭಾವುಕರಾದರು.
ಪ್ರಾಣ ಬಿಟ್ಟ ಪತ್ತೇದಾರಿ ನಯನಾ: ಬೆಳಗಾವಿ ಪೊಲೀಸರಿಂದ ಅಂತಿಮ ಸೆಲ್ಯೂಟ್
ನಯನಾಳಿಗೆ ವಯಸ್ಸಾಗಿದ್ದ ಕಾರಣ ಈ ಹಿಂದಿನ ನಗರ ಪೊಲೀಸ್ ಆಯುಕ್ತ ಡಾ. ಡಿ.ಸಿ.ರಾಜಪ್ಪ ಅವರು ಅದಕ್ಕೆ 2018 ಮಾರ್ಚ್ 1ರಂದು ನಿವೃತ್ತಿ ಮಾಡಿದ್ದರು. ಆದರೆ ನಯನಾಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ ರಾಜಪ್ಪ, ನಿವೃತ್ತಿ ಬಳಿಕ ಅದನ್ನು ಸಾಕಲು ಶ್ವಾನ ದಳದ ಸಿಬ್ಬಂದಿಗೆ ನೀಡದೆ ಪೊಲೀಸ್ ಆಯುಕ್ತರ ನಿವಾಸದಲ್ಲೇ ಸ್ವಂತ ಖರ್ಚಿನಲ್ಲಿ ಸುಂದರವಾದ ಪುಟ್ಟ ಗೂಡು ನಿರ್ಮಿಸಿ ಸಾಕಿ ಸಲಹುತ್ತಿದ್ದರು. ಡಾ. ಡಿ.ಸಿ.ರಾಜಪ್ಪ ಬೆಳಗಾವಿಯಿಂದ ಬೆಂಗಳೂರಿಗೆ ವರ್ಗವಾದ ಬಳಿಕ ನಗರ ಪೊಲೀಸ್ ಆಯುಕ್ತರಾಗಿ ಆಗಮಿಸಿದ ಬಿ.ಎಸ್.ಲೋಕೇಶ್ ಕುಮಾರ ಅವರಿಗೂ ಇಲ್ಲೇ ಸಾಕುವಂತೆ ವಿನಂತಿಸಿದ್ದರು. ಇದರಿಂದ ಅವರೂ ಮನೆಯ ಸದಸ್ಯೆಯಂತೆ ನಯನಾಳನ್ನು ನೋಡಿಕೊಂಡಿದ್ದರು.
ನಯನಾಳ ಕಾರ್ಯಕ್ಷಮತೆ ಮರೆಯದ ಡಿ.ಸಿ.ರಾಜಪ್ಪ, ಇದೀಗ ಆಕೆಯ ಸಾವಿನ ವಿಷಯ ತಿಳಿದು ಭಾವುಕರಾಗಿದ್ದಾರೆ.