ಬೆಳಗಾವಿ: ಸಹಾಯ ಮಾಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಜಿಲ್ಲೆಯ ಗೋಕಾಕ್ ನಗರದಲ್ಲಿ ಬೆಳಕಿಗೆ ಬಂದಿದೆ. ಗೋಕಾಕ್ ತಾಲೂಕಿನ ತಪಸಿ ಗ್ರಾಮದ ಬಾಳಪ್ಪ ನಾಯಿಕ ಬಂಧಿತ ವ್ಯಕ್ತಿ.
ಅತ್ಯಾಚಾರ ಎಸಗಿದ ದೃಶ್ಯವನ್ನು ವಿಡಿಯೋ ಮಾಡಿಕೊಂಡು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಈ ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರಕರಣವೊಂದರ ಕುರಿತು ಮಹಿಳೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಈ ವೇಳೆ ಪ್ರಕರಣದ ರಾಜಿ ಸಂಧಾನ ಮಾಡಿಸೋದಾಗಿ ಭರವಸೆ ನೀಡಿರುವ ಬಾಳಪ್ಪ ನಾಯಿಕ ನೊಂದ ಮಹಿಳೆಯಗೆ ಪರಿಚಿತನಾಗಿದ್ದ.
ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯ ಮನೆಗೆ ತೆರಳಿದ ಆರೋಪಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. ಈ ಬಗ್ಗೆ ಸಾಕ್ಷ್ಯಸಮೇತ ದೂರು ನೀಡಲು ಮಹಿಳೆ ಮನೆಯಲ್ಲಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಇಟ್ಟಿದ್ದರು. ಜೂನ್ 7 ರಂದು ಮನೆಗೆ ಆಗಮಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ, ಅತ್ಯಾಚಾರ ಎಸಗಿದ್ದ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿತ್ತು. ಬಳಿಕ ಮಹಿಳೆ ಗೋಕಾಕ್ ನಗರ ಠಾಣೆಗೆ ದೂರು ನೀಡಿದ್ದಳು. ಈ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿದ ಗೋಕಾಕ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.