ಬೆಳಗಾವಿ: ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ನಿರ್ಧರಿಸಿದೆ. ಇನ್ನಷ್ಟು ಕಠಿಣ ಕಾನೂನು ಜಾರಿಗೆ ತರುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಂದು ಸಮುದಾಯದ ಪರವಾಗಿದೆ. ಬಹುಸಂಖ್ಯಾತರ ಬಗ್ಗೆ ಕಾಳಜಿಯಿಲ್ಲ. ಕೇವಲ ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿದೆ. ಎಲ್ಲರ ಬಗ್ಗೆ ಕಾಂಗ್ರೆಸ್ಗೆ ಕಾಳಜಿಯಿರಬೇಕು ಎಂದರು.
ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಶೋಕ್, ಕಾಂಗ್ರೆಸ್ನವರಿಗೆ ಬಹುಸಂಖ್ಯಾತರ ಬಗ್ಗೆ ಗಮನವೇ ಇಲ್ಲ. ಹೀಗಾಗಿ ದೇಶದಲ್ಲಿ ಕಾಂಗ್ರೆಸ್ ಮೂಲೆಗುಂಪಾಗಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ವಿರೋಧ ಹಾಗೂ ಪ್ರತಿಭಟನೆ ನಡೆಸುವ ಮೂಲಕ ಇನ್ನಷ್ಟು ಮೂಲೆಗುಂಪಾಗಲು ಅವರೇ ಹಳ್ಳ ತೋಡಿಕೊಂಡಂತೆ ಎಂದು ಕಿಡಿಕಾರಿದರು.
ಯಾವುದೇ ಧರ್ಮದಲ್ಲಿ ಮತಾಂತರ ಅನ್ನುವುದು ಅಪರಾಧ. ಮತಾಂತರ ಮಾಡುವುದು, ಆಮಿಷ ಒಡ್ಡುವುದನ್ನು ನಾವು ಖಂಡಿಸುತ್ತೇವೆ. ಮತಾಂತರ ನಿಷೇಧ ಕಾಯ್ದೆ ಈಗಾಗಲೇ ದೇಶದಲ್ಲಿ ಜಾರಿಯಿದೆ. ಅದನ್ನು ಇನ್ನಷ್ಟು ಕಠಿಣಗೊಳಿಸುತ್ತಿದ್ದೇವೆ ಅಷ್ಟೇ. ನಾವು ಈ ಕಾನೂನನ್ನು ಬಲಪಡಿಸುತ್ತವೆ ಎಂದು ಹೇಳಿದ್ದಕ್ಕೆ ಕಾಂಗ್ರೆಸ್ನವರು ಕೂಗಲು ಶುರು ಮಾಡಿದ್ದಾರೆ. ಇದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
'ಲವ್ ಜಿಹಾದ್' ಸಹ ಇದರ ಒಂದು ಅಂಗವಾಗಿದೆ. ಮತಾಂತರ ಮಾಡುವುದಕ್ಕಾಗಿಯೇ ಲವ್ ಜಿಹಾದ್ ಮಾಡಲಾಗುತ್ತದೆ. ಮದುವೆ ಮಾಡಿಕೊಳ್ಳುತ್ತೇನೆ ಅದಕ್ಕೂ ಮುನ್ನ ಮತಾಂತರ ಆಗಬೇಕು ಎಂಬುದು ಸಹ ಒಂದು ಆಮಿಷ. ಪಾಕಿಸ್ತಾನ, ಬಾಂಗ್ಲಾದೇಶ ಪ್ರತ್ಯೇಕ ಆದ ರೀತಿ ನಮ್ಮ ದೇಶದಲ್ಲಿ ಆಗಬಾರದು. ಇದಕ್ಕೆ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕು. ಆಗ ಮಾತ್ರ ದೇಶ ಉಳಿಯಲಿದೆ. ಬಿಜೆಪಿ ಇದಕ್ಕೆ ಕಟಿಬದ್ಧವಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದರು.