ಬೆಳಗಾವಿ: ಕಳೆದೆರಡು ವರ್ಷಗಳಿಂದ ಕೊರೊನಾ ಭೀತಿಯಿಂದ ಕಳೆಗುಂದಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಗೆ ನಿನ್ನೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ, ಜೈ ಶಿವಾಜಿ-ಜೈ ಭವಾನಿ ಎಂಬ ಘೋಷಣೆಗಳ ಮಧ್ಯೆ ಆರಂಭವಾದ ಮೆರವಣಿಗೆ ನೋಡುಗರ ಕಣ್ಮನ ಸೆಳೆಯಿತು. ಶಿವಾಜಿಯ ಇತಿಹಾಸ ಸಾರುವ ಕಲಾಕೃತಿಗಳು, ವಾದ್ಯಮೇಳಗಳು, ದೇಸಿ ಸೊಗಡಿನ ಡೋಲು, ಝಾಂಜ್ ಪಥಕಗಳು ಮೆರವಣಿಗೆಗೆ ಮೆರುಗು ತಂದವು.
ಬೆಳಗಾವಿ ನಗರದಲ್ಲಿ ಬುಧವಾರ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಸಂಜೆ 6.30ರ ಸುಮಾರಿಗೆ ನರಗುಂದಕರ ಬಾವಿ ವೃತ್ತದಲ್ಲಿ ಆರಂಭಗೊಂಡು ವಿವಿಧ ಮಾರ್ಗವಾಗಿ ಸಂಚರಿಸಿತು. ಇಂದು ಬೆಳಗ್ಗೆ 10 ಗಂಟೆಗೆ ಕಪಿಲೇಶ್ವರ ದೇವಸ್ಥಾನದ ಪರಿಸರದಲ್ಲಿ ಶಾಂತಿಯುತವಾಗಿ ಸಮಾರೋಪಗೊಳ್ಳಲಿದೆ. ಸಾಯಂಕಾಲ ನಗರದ ನರಗುಂದಕರ ಭಾವೆ ವೃತ್ತದಲ್ಲಿ ಶಿವ ಜಯಂತಿ ಮೆರವಣೆಗೆಗೆ ಸಮಿತಿಯ ಮುಖಂಡರು ಹಾಗೂ ವಿವಿಧ ಶಿವ ಯುವಕ ಮಂಡಳದ ಪದಾಧಿಕಾರಿಗಳು, ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಶಿವಪ್ರತಿಮೆಗೆ ಹಾಗೂ ಮರಾಠಾ ಸಂಪ್ರದಾಯದ ಶಿವ ಪಾಲಿಕೆಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ನರಗುಂದ ಭಾವೆ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಮಾರುತಿ ಬೀದಿ, ಕಾವೇರಿ ಕೋಲ್ಡ್ರಿಂಕ್ಸ್ ಮಾರ್ಗ, ರಾಮದೇವ ಬೀದಿ, ಸಮಾದೇವಿ ಬೀದಿ, ಕಂಬಳಿಖೂಟ, ಕಾಲೇಜು ರಸ್ತೆ, ಬೋಗಾರವೆಸ್, ವೃತ್ತದ ಮಾರ್ಗವಾಗಿ ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ ಬೀದಿ, ಮೇಮುಕಲಾನಿ ಚೌಕ್, ತಹಶೀಲ್ದಾರಗಲ್ಲಿ ಮಾರ್ಗವಾಗಿ ಬಾಂಧುರಗಲ್ಲಿ ಮೂಲಕ ಕಪಿಲೇಶ್ವರಕ್ಕೆ ಬರಲಿದೆ.
ವಿವಿಧ ಬಡಾವಣೆಗಳ ಸಂಘ ಹಾಗೂ ಮಂಡಳಿಗಳು ರೂಪಕಗಳು ಶಿವಾಜಿಯ ಚರಿತ್ರೆ ಕಟ್ಟಿ ಕೊಟ್ಟವು. ಯುವಕ, ಯುವತಿಯರ ಮಂಡಳದವರು, ಮಹಿಳಾ ಸಂಘ-ಸಂಸ್ಥೆಗಳು ವಿವಿಧ ಪಾತ್ರಧಾರಿಗಳು ಕಿರುನಾಟಕಗಳನ್ನು ಪ್ರದರ್ಶಿಸಿ ನೋಡುಗರ ಮೆಚ್ಚುಗೆ ಗಳಿಸಿದರು. ಶಿವಾಜಿ ಬಾಲ್ಯ, ಶಿಕ್ಷಣ, ಯುದ್ಧ ಕಲೆ, ಪಟ್ಟಾಭಿಷೇಕ, ಕೋಟೆಗಳನ್ನು ಗೆದ್ದು ರಾಜ್ಯಭಾರ ಮಾಡಿರುವ ಪ್ರಸಂಗಗಳು, ರಾಜತಾಂತ್ರಿಕತೆ, ಭಾಗವಾಧ್ವಜಗಳ ಹಾರಾಟ, ವಿವಿಧ ಶಿವ ಸಂಘಟನೆಗಳ ಯುವಕರ ಶಕ್ತಿ ಪ್ರದರ್ಶನ, ಬೆಂಕಿ ಉಗುಳುವಿಕೆ ಮೆರವಣಿಗೆಯ ವಿಶೇಷ ಆಕರ್ಷಣೆಗಳಾಗಿದ್ದು, ಸಿಡಿಮದ್ದು, ಗುಲಾಲು ಸಿಂಪರಣೆ ಮೆರವಣಿಗೆಯ ಇನ್ನೊಂದು ಮುಖವಾಗಿತ್ತು.
ಶಿವಾಜಿ ಮಹಾರಾಜರ ಆಡಳಿತ, ದರ್ಬಾರ್ ಹಾಗೂ ಮೊಘಲರ ಪ್ರತಿನಿಧಿಯಾಗಿ ಬಂದ ಅಫಜಲ್ ಖಾನ್‌ನನ್ನು ಜಾಣ್ಮೆಯಿಂದ ವಧಿಸಿದ ದೃಶ್ಯ, ಜೀಜಾಮಾತೆಯ ಮಾರ್ಗದರ್ಶನ, ದಾದಾಜಿ ಕೊಂಡದೇವರ ಗುರೂಪದೇಶ, ಶಿವಾಜಿ ಭಕ್ತಿಗೆ ಪ್ರಸನ್ನಳಾದ ಕೋಲ್ಹಾಪೂರದ ಶ್ರೀಲಕ್ಷ್ಮೀ ಖಡ್ಗ ಪ್ರಧಾನಿಸುತ್ತಿರುವುದು ಹೀಗೆ ಹತ್ತು ಹಲವು ಜೀವಂತ ರೂಪಕಗಳು ಶಿವಾಜಿ ಮಹಾರಾಜರ ಸ್ಮರಣೆಯಾಗಿ ಆಕರ್ಷಣೀಯವಾಗಿದ್ದವು. ಮೆರವಣಿಗೆ ಮಾರ್ಗದುದ್ದಕ್ಕೂ ಮಹಾನಗರ ಪಾಲಿಕೆ ಬೆಳಕಿನ ವ್ಯವಸ್ಥೆ ಕಲ್ಪಿಸಿತ್ತು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಮೊದಲ ಬಾರಿಗೆ ಡ್ರೋನ್ ಹಾರಾಟ: ನೆರೆ ಜಿಲ್ಲೆಯ ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಿಂದ ಎಚ್ಚೆತ್ತುಕೊಂಡಿರುವ ಬೆಳಗಾವಿ ನಗರ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ನಗರ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮರಾಗಳ ಕಣ್ಗಾವಲು ಇಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬೇರೆ ಜಿಲ್ಲೆಗಳಿಂದಲೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.