ಚಿಕ್ಕೋಡಿ: ಇಲ್ಲಿನ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ ಹತ್ತು ರೂಪಾಯಿ ಮುಖಬೆಲೆಯ ಒಂದು ನೋಟು ಪತ್ತೆಯಾಗಿದ್ದು, ಚಿಕ್ಕೋಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಾಲೂಕಿನ ಕರೋಶಿ ಗ್ರಾಮದಲ್ಲಿ ಅಂದಾಜು 12 ರಿಂದ 14ಸಾವಿರ ಜನಸಂಖ್ಯೆ ಹೊಂದಿದ್ದು, ಎಲ್ಲಾ ಜಾತಿ ಜನಾಂಗದವರು ಈ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಪಾಕಿಸ್ತಾನದ ಕರೆನ್ಸಿ ಇಲ್ಲಿಗೆ ಹೇಗೆ ಬಂತು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಕರೋಶಿ ಗ್ರಾಮದ ಬಸ್ ನಿಲ್ದಾಣದ ರಸ್ತೆಯಲ್ಲಿ ಪಾಕಿಸ್ತಾನದ ಹತ್ತು ರೂಪಾಯಿ ಮೌಲ್ಯದ ಕರೆನ್ಸಿ ಯುವಕನೋರ್ವನಿಗೆ ಬಿದ್ದು ಸಿಕ್ಕಿದೆ. ಅದರಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರವಿರುವ ಈ ನೋಟು ಎಸಿಜೆ 1389126 ನಂಬರನ್ನು ಹೊಂದಿದ್ದು, ನೋಟಿನ ಮೇಲೆ ಆಂಗ್ಲ ಭಾಷೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಹಾಗೂ ಉರ್ದು ಭಾಷೆಯ ಬರಹಗಳನ್ನು ಹೊಂದಿದೆ.
ಪಾಕಿಸ್ತಾನದ 10 ರೂ. ಮುಖಬೆಲೆಯ ನೋಟನ್ನು ಚಿಕ್ಕೋಡಿ ಪೊಲೀಸರು ವಶಪಡಿಸಿಕೊಂಡಿದ್ದು, ಚಿಕ್ಕೋಡಿ ಪೊಲೀಸರು ಮತ್ತು ಗುಪ್ತಚರ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ. ಕರೋಶಿ ಗ್ರಾಮಕ್ಕೆ ಯಾರಾದರೂ ಪಾಕಿಸ್ತಾನದಿಂದ ಬಂದಿದ್ದಾರೆಯೇ? ನೋಟು ಎಲ್ಲಿಂದ ಬಂತು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಓದಿ : ಉಕ್ರೇನ್ ನಿರಾಶ್ರಿತರಿಗೆ ನೆರವು ನೀಡಲು ಪ್ರಿಯಾಂಕಾ ಚೋಪ್ರಾ ಕರೆ