ಅಥಣಿ (ಬೆಳಗಾವಿ): ಸರ್ಕಾರದ ಬೊಕ್ಕಸದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಗಿಡಗಳನ್ನು ನಾಟಿ ಮಾಡುತ್ತಾರೆ. ಆದರೆ, ಸರಿಯಾಗಿ ಪೋಷಣೆ ಮಾಡದೇ ಇರುವುದರಿಂದ ಎರಡು ಸಾವಿರಕ್ಕೂ ಅಧಿಕ ಗಿಡಗಳು ಒಣಗಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಕುರಿ ಸಂವರ್ಧನಾ ಕೇಂದ್ರದ 15 ಎಕರೆ ಜಮೀನಿನಲ್ಲಿ 2,400 ಗಿಡಗಳನ್ನು ಕಳೆದ ವರ್ಷ ನೆಡುತೋಪು ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ನೆಡಲಾಗಿತ್ತು. ಆದರೆ ಬೇಸಿಗೆ ಸಂದರ್ಭದಲ್ಲಿ ನೀರು ಹಾಕದಿರುವುದರಿಂದ ಗಿಡಗಳು ಸಂಪೂರ್ಣವಾಗಿ ನಾಶವಾಗಿದ್ದು, ಅಥಣಿ ಸಾಮಾಜಿಕ ಅರಣ್ಯ ವಲಯ ಅಧಿಕಾರಿಗಳು ಪರಿಸರ ಸಂರಕ್ಷಣೆಗೆ ಮುಂದಾಗುತ್ತಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಒಣ ಬೇಸಾಯ ಹಾಗೂ ಹೆಚ್ಚಾಗಿ ಸರ್ಕಾರಿ ಭೂ ಪ್ರದೇಶ ಹೊಂದಿರುವ ಅಥಣಿ ತಾಲೂಕಿನಲ್ಲಿ ಅರಣ್ಯ ಅಧಿಕಾರಿಗಳು ನಾಮಕಾವಾಸ್ತೆಗೆ ಮಾತ್ರ ಗಿಡಗಳನ್ನು ನೆಟ್ಟಿದ್ದಾರೆ. ಅವುಗಳನ್ನು ಸರಿಯಾಗಿ ಪಾಲನೆ-ಪೋಷಣೆ ಮಾಡದೆ ಸರ್ಕಾರದ ಬೊಕ್ಕಸದ ಹಣವನ್ನು ಪೋಲು ಮಾಡುತ್ತಿದ್ದಾರೆ. ಅರಣ್ಯ ಸಚಿವ ಅರವಿಂದ ಲಿಂಬಾವಳಿ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಷಯಕ್ಕೆ ಸಂಬಂಧಿಸಿದಂತೆ ಅಥಣಿ ತಾಲೂಕು ಸಾಮಾಜಿಕ ಅರಣ್ಯ ವಲಯ ಅಧಿಕಾರಿ ರಾಜು ಕಾಂಬಳೆ ಅವರನ್ನು ಈಟಿವಿ ಭಾರತ ದೂರವಾಣಿ ಮೂಲಕ ಸಂಪರ್ಕಿಸಿದಾಗ, ನನ್ನ ಗಮನಕ್ಕೆ ಈ ವಿಷಯ ಬಂದಿಲ್ಲ. ಕೆಲವು ಕಡೆ ಭೂ ಪ್ರದೇಶ ವೈಪರೀತ್ಯದಿಂದ ಗಿಡಗಳು ನಾಶವಾಗುವ ಸಾಧ್ಯತೆಯಿದೆ. ಸ್ಥಳೀಯ ಅಧಿಕಾರಿಗಳನ್ನು ವಿಚಾರಿಸಿ, ಲೋಪಗಳನ್ನು ಸರಿಪಡಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.