ಬೆಳಗಾವಿ: ನಮ್ಮ ರಾಜ್ಯದಲ್ಲಿ ಶಾಲೆಗಳಿಗೆ ಇದೀಗ ಜೀವ ಬಂದಿದೆ. 2020ರಲ್ಲಿ ಕೋವಿಡ್ನ ಅತ್ಯಂತ ಹೆಚ್ಚು ಪರಿಣಾಮ ಬಿದ್ದಿದ್ದು ಶಿಕ್ಷಣ ಇಲಾಖೆ ಮೇಲೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಮತ್ತು ಬಾಲ್ಯ ವಿವಾಹ ಜಾಸ್ತಿಯಾಯಿತು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಹೇಳಿದರು.
ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದಲ್ಲಿ ಜನಕಲ್ಯಾಣ ಟ್ರಸ್ಟ್ ಸಂಚಾಲಿತ ವಿದ್ಯಾ ವಿಕಾಸ ಸಮಿತಿಯಿಂದ ಪುನರ್ ನಿರ್ಮಿತವಾದ ಮಾಧ್ಯಮಿಕ ಶಾಲೆಯ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೋವಿಡ್ ಕಾರಣದಿಂದ ತರಗತಿಗಳು ನಡೆಯಲಿಲ್ಲ, ಮಕ್ಕಳು ಶಾಲೆಗೆ ಹೋಗಲಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಮತ್ತು ಬಾಲ್ಯ ವಿವಾಹ ಜಾಸ್ತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಫೆ.1ರಿಂದ 9 ಮತ್ತು 11ನೇ ತರಗತಿ ಆರಂಭ ಮಾಡಿದ್ದೇವೆ. 1ನೇ ತರಗತಿಯಿಂದ ಶಾಲೆ ಪ್ರಾರಂಭ ಮಾಡಿ ಅಂತಾ ಒತ್ತಾಯ ಮಾಡುತ್ತಿದ್ದಾರೆ. ಶಾಲೆ ಬಂದ್ ಮಾಡಿ ಬಾರ್ ಓಪನ್ ಮಾಡುವುದು ಒಳ್ಳೆಯದಲ್ಲ ಎಂದು ಕೆಲವರು ಹಾಸ್ಯ ಮಾಡುತ್ತಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ 1 ರಿಂದ 5ನೇ ತರಗತಿಗಳನ್ನು ಆರಂಭ ಮಾಡಲಾಗುವುದು. ಇದರ ಜೊತೆಗೆ ಮಧ್ಯಾಹ್ನದ ಬಿಸಿಯೂಟವೂ ಆರಂಭವಾಗಬೇಕು. ಕಲಿಕೆಯ ಮಟ್ಟ ಜಾಸ್ತಿಯಾಗುವ ಮೂಲಕ ಶಿಕ್ಷಣ ದೇಶದ ಆಸ್ತಿ ಆಗಬೇಕು ಎಂದರು.
ಇದಕ್ಕೂ ಮುಂಚೆ ಜಾಂಬೋಟಿ ಗ್ರಾಮಕ್ಕೆ ಆಗಮಿಸಿದ ಸಚಿವರನ್ನು ಉಪವಿಭಾಗಾಧಿಕಾರಿ ಅಶೋಕ ತೇಲಿ, ಆರ್.ಎಸ್.ಎಸ್ ರಾಷ್ಟ್ರೀಯ ಮುಖಂಡ ಅರವಿಂದರಾವ್ ದೇಶಪಾಂಡೆ, ಶಾಸಕ ಅನಿಲ ಬೆನಕೆ, ಅಭಯ್ ಪಾಟೀಲ ಸೇರಿದಂತೆ ಇತರರು ಸ್ವಾಗತಿಸಿದರು. ಶಾಲಾ ಮಕ್ಕಳು ಚಪಾಳೆ ತಟ್ಟುವ ಮೂಲಕ ಸಚಿವರನ್ನು ಸ್ವಾಗತಿಸಿದರು. ಜಾಂಬೋಟಿ ಶಾಲಾ ಶಿಕ್ಷಕಿಯರು ಸಚಿವರಿಗೆ ಆರತಿ ಬೆಳಗಿ ತಿಲಕವನ್ನಿಟ್ಟು ಬರಮಾಡಿಕೊಂಡರು.
ಕಳೆದ ಪ್ರವಾಹದಿಂದ ಜಾಂಬೋಟಿ ಶಾಲೆ ಸಂಪೂರ್ಣ ಹಾಳಾಗಿತ್ತು. ಹೀಗಾಗಿ ಇದನ್ನು ಜನಕಲ್ಯಾಣ ಟ್ರಸ್ಟ್ ಸಂಚಾಲಿತ ವಿದ್ಯಾ ವಿಕಾಸ ಸಮಿತಿಯವರು ದತ್ತು ಪಡೆದುಕೊಂಡು ಪುನರ್ನಿರ್ಮಾಣ ಮಾಡಿದ್ದಾರೆ. ಶಾಲೆಯ ಹೊಸ ಕಟ್ಟಡವನ್ನು ಸಚಿವ ಸುರೇಶಕುಮಾರ ಉದ್ಘಾಟಿಸಿ ಕ್ಲಾಸ್ ರೂಮ್ಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳಿಗೆ ಆಹಾರ ಪದಾರ್ಥಗಳಿರುವ ಫುಡ್ ಕಿಟ್ ವಿತರಣೆ ಮಾಡಿದರು.