ಬೆಳಗಾವಿ: ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸುವಂತೆ ಆಗ್ರಹಿಸಿ ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಕೊನೆ ದಿನ ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಿದ್ದೇವೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು.
ನಗರದ ಕಣಬರಗಿ ರಸ್ತೆಯ ಸಂಕಲ್ಪ ಗಾರ್ಡನ್‍ನಲ್ಲಿ ಕುರುಬ ಸಮುದಾಯ ಎಸ್‍ಟಿಗೆ ಸೇರಿಸುವ ನಿಟ್ಟಿನಲ್ಲಿ ವಿವಿಧ ಸ್ವಾಮೀಜಿಗಳು, ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದರು. ಕುರುಬ ಸಮಾಜಕ್ಕೆ ಒಳ್ಳೆಯದು ಆಗಬೇಕೆಂದು ಸ್ವಾಮೀಜಿಗಳು ಪಾದಯಾತ್ರೆ ಹಮ್ಮಿಕೊಂಡಿದ್ದು, ನಮ್ಮ ಕಡೆಯಿಂದ ಸಾಧ್ಯವಾದಷ್ಟು ಸಹಕಾರ ನೀಡಲಾಗುವುದು ಎಂದರು.
ಕುರುಬ ಸಮಾಜಕ್ಕೆ ಎಸ್ಟಿ ಹೋರಾಟದ ಬೇಡಿಕೆ ಈಡೇರಲು ಎರಡು ವರ್ಷ ಹೋಗುತ್ತೋ ಏನೋ.. ಆದರೆ, ಆಗೋವರೆಗೂ ಮಾತ್ರ ಹೋರಾಟವನ್ನು ಕೈಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು. ಜನವರಿ 15 ರಿಂದ ಕಾಗಿನೆಲೆಯಿಂದ ಬೆಂಗಳೂರಿನವರೆ ಪಾದಯಾತ್ರೆ ನಡೆಸೋಣ. ಅದಕ್ಕೂ ಮೊದಲು ಡಿ.28ರಂದು ಕಾಗಿನೆಲೆಯಲ್ಲಿ ಒಂದು ಪೂರ್ವಭಾವಿ ಸಭೆ ಮಾಡಲಾಗುವುದು.
ಆ ಸಭೆಯಲ್ಲಿ ಸಮಾಜದ ಮಠ ಮಂದಿರಗಳ ಅಭಿವೃದ್ಧಿಗೆ ಬೇಕಾದ ಆರ್ಥಿಕ ಸಹಾಯದ ಪಟ್ಟಿ ತೆಗೆದುಕೊಂಡು ಬರಬೇಕು. ನಂತರ ಪಾದಯಾತ್ರೆಯ ಕೊನೆ ದಿನ ಕನಿಷ್ಠ 10 ಲಕ್ಷ ಜನರನ್ನು ಸೇರಿಸುವ ಗುರಿಯನ್ನು ನಾವು ಇಟ್ಟುಕೊಳ್ಳೋಣ. ಈ ಮೂಲಕ ಸರ್ಕಾರದ ಮುಂದೆ ನಮ್ಮ ಸಮಾಜದ ಬೇಡಿಕೆ ಇರಿಸೋಣ ಎಂದರು.
ಸ್ವಾಮೀಜಿಗಳ ಸಹವಾಸದಿಂದ ಭಾನುವಾರ, ಸೋಮವಾರ ಮಟನ್ ತಿನ್ನೋದ ಬಿಟ್ಟೆ:
ಕುರುಬರ ಗುರುಗಳಾದ ಒಡೆಯರ್ ಸ್ವಾಮೀಜಿಗಳಿಗೆ ನೀವ್ಯಾರಾದರೂ ನಾನ್ ವೆಜ್ ತಿನ್ನೋರ ಇದ್ದೀರಾ.. ಇಲ್ಲ ಎಂದು ಈಶ್ವರಪ್ಪನವರ ಪ್ರಶ್ನೆಗೆ ಸ್ವಾಮೀಜಿಗಳು ಉತ್ತರಿಸಿದರು. ಆಗ ಈಶ್ವರಪ್ಪ ನಿಮ್ಮನ್ನ ಯಾರು ಕುರುಬರು ಅಂತಾ ಕರಿತಾರೆ ಎಂದು ಮಾತು ಮುಂದುವರೆಸಿ, ಮಕ್ಕಳಿಗೆ ಹಾಗೂ ಸಮಾಜಕ್ಕೆ ಗುರುಗಳಿಂದ ಸಂಸ್ಕಾರ ಸಿಗುತ್ತೆ. ನಿಮ್ಮನ್ನು ನೋಡಿದರೆ ನಂಗೂ ನಾನ್‌ವೆಜ್ ತಿನ್ನೋದನ್ನ ಬಿಡಬೇಕು ಅನಿಸುತ್ತದೆ. ಅಂತಹ ಸಂಸ್ಕಾರ ಗುರುಗಳಲ್ಲಿದೇ ಎಂದರು.
ಭಾನುವಾರ ನಮ್ಮ ಮನೆ ದೇವರ ವಾರ. ಹೀಗಿದ್ದರೂ ನಾನು ಒಂದ್ ಕಾಲದಲ್ಲಿ ಮಟನ್ ತಿನ್ನುತ್ತಿದ್ದೆ. ಆದರೆ, ಮನೆಯ ಹೆಣ್ಣುಮಕ್ಕಳ ಕೋರಿಕೆಯ ಮೇರೆಗೆ ಅಂದು ಮಟನ್ ತಿನ್ನೊದನ್ನ ಬಿಟ್ಟಿದ್ದೆ. ಆದರೆ, ಮತ್ತೊಂದು ದಿನ ಸಹೋದರಿ ನಿಧನರಾದಾಗ ಕಾಶಿಗೆ ಹೋಗಿ ಪೂಜೆ ಮುಗಿಸಿಕೊಂಡು ಬರುವಾಗ ಸ್ವಾಮೀಜಿಗಳೊಬ್ಬರು, ತುಂಬಾ ಇಷ್ಟಪಡುವುದೇನಿದೆ ಅದನ್ನ ಬಿಡಬೇಕು ಎಂದರು.
ಆಗ ಮಟನ್ ಪ್ರಿಯನಾದ ನಾನು ಸ್ವಾಮೀಜಿಗಳ ಮಾತಿನಂತೆ ಅಂದಿನಿಂದ ಇಂದಿನವರೆಗೆ ಅಂದರೆ ಸುಮಾರು 15 ವರ್ಷಗಳಿಂದ ಸೋಮವಾರ ಹಾಗೂ ಭಾನುವಾರ ಮಟನ್ ತಿನ್ನೋದನ್ನ ಬಿಟ್ಟಿದ್ದೇನೆ ಎಂದರು. ಸಭೆಯಲ್ಲಿ ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದ ಪುರಿ ಸ್ವಾಮೀಜಿ, ಅವಧೂತಸಿದ್ಧ ಸ್ವಾಮೀಜಿ ಇದ್ದರು.