ಬೆಳಗಾವಿ: ನಗರದ ಕೋಟೆ ಕೆರೆಯ ಆವರಣದಲ್ಲಿ ವಾಯು ವಿಹಾರಕ್ಕೆ ಶುಲ್ಕ ವಿಧಿಸಿರುವ ಜಿಲ್ಲಾಧಿಕಾರಿಗಳ ಕ್ರಮ ವಿರೋಧಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ಯುವ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.
ಕೋಟೆ ಕೆರೆಯ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಕೋಟೆ ಕೆರೆಗೆ ಜಿಲ್ಲಾಧಿಕಾರಿಗಳು ವಿಧಿಸಿರುವ ಶುಲ್ಕ ಹಿಂಪಡೆಯಬೇಕು, ಇದರಿಂದ ಜನಸಮಾನ್ಯರಿಗೆ ತೀವ್ರ ಹೊರೆಯಾಗುತ್ತದೆ. ಹಣ ಕೊಟ್ಟು ವಾಯು ವಿಹಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ಕೈಬಿಡಬೇಕೆಂದು ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಶಿವಾನಂದ ತಂಬಾಕಿ ಆಗ್ರಹಿಸಿದ್ದಾರೆ.
ಬೆಳಗ್ಗೆ ಮತ್ತು ಸಾಯಂಕಾಲ ನೂರಾರು ಜನರು ವಾಯು ವಿಹಾರಕ್ಕೆಂದು ಕೋಟೆ ಕೆರೆಗೆ ಆಗಮಿಸುತ್ತಾರೆ. ಆದರೆ ಜಿಲ್ಲಾಧಿಕಾರಿಗಳು ಪ್ರತಿಯೊಬ್ಬರಿಗೆ 10 ರೂಪಾಯಿಯಂತೆ ಶುಲ್ಕ ವಿಧಿಸಿದ್ದಾರೆ. ಅದೇ ರೀತಿ ತಿಂಗಳಿಗೆ 100 ರೂಪಾಯಿಗೆ ಪಾಸ್ ನೀಡುವ ಕುರಿತು ಆದೇಶಿಸಿದ್ದಾರೆ. ಇದರಿಂದ ವಯೋವೃದ್ದರಿಗೆ ಮತ್ತು ಚಿಕ್ಕಮಕ್ಕಳಿಗೆ ತೀವ್ರ ತೊಂದರೆಯಾಗುತ್ತದೆ, ಬಡವರಿಗೆ ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ತಕ್ಷಣವೇ ಜಿಲ್ಲಾಧಿಕಾರಿಗಳು ಈ ಆದೇಶ ಹಿಂಪಡೆಯಬೇಕು ಹಾಗೂ ಈ ಸಂಬಂಧ ನಾಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.