ಬೆಳಗಾವಿ : ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಇಂದು ಮಂಡಿಸಲಿರುವ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಬಹುಮತ ಇದೇ ಅಂತಾ ದಬ್ಬಾಳಿಕೆ ಮಾಡಬಾರದು. ತಮಗೆ ತಿಳಿದಿದ್ದನ್ನು ಮಾಡಲು ಆಗಲ್ಲ. ವಾಸ್ತವ ಸ್ಥಿತಿ ಬಗ್ಗೆ ಬಿಜೆಪಿ ನಾಯಕರು ಅರಿಯಬೇಕು. ಬಿಜೆಪಿಯವರು ಮತಾಂತರ ನಿಷೇಧ ಮಸೂದೆ ಮಂಡನೆ ಮಾಡಲಿ. ನಾವು ಏನು ಮಾಡಬೇಕು ಅದನ್ನು ಮಾಡುತ್ತೇವೆ. ಮಸೂದೆ ಅಂಗೀಕಾರಕ್ಕೆ ಪರಿಷತಿನಲ್ಲಿ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದರು.
ಉತ್ತರಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಯ ಸದುದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ. ಆದರೆ, ಯಾವ ಉದ್ದೇಶಕ್ಕೆ ಸುವರ್ಣಸೌಧ ನಿರ್ಮಾಣ ಆಯಿತೋ ಅದರ ಲಾಭ ಮಾತ್ರ ಆಗುತ್ತಿಲ್ಲ. ಇಂದಿನಿಂದ ನಾನು ಅಧಿವೇಶನದಲ್ಲಿ ಭಾಗವಹಿಸಲಿದ್ದೇನೆ. ಕಳೆದ ವಾರ ಸಭೆಗೆ ಗೈರಾಗಿದ್ದ ಬಗ್ಗೆ ಸ್ವೀಕರ್ಗೆ ತಿಳಿಸಿದ್ದೇನೆ. ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಕೊನೆಯ ಎರಡು ದಿನ ನೀಡುವುದಾಗಿ ಸ್ಪೀಕರ್ ಹೇಳಿದ್ದಾರೆ. ಈ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಹೆಚ್ಡಿಕೆ ತಿಳಿಸಿದರು.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮತಾಂತರ ನಿಷೇಧ ವಿಧೇಯಕಕ್ಕೆ ವಿರೋಧ ಮಾಡಬೇಡಿ: ಮಾಜಿ ಸಿಎಂ ಬಿಎಸ್‌ವೈ
ಗಡಿಭಾಗದಲ್ಲಿ ಉದ್ಧಟತನ, ನಾಡದ್ರೋಹಿ ಕೃತ್ಯಗಳು ಹೆಚ್ಚುತ್ತಿವೆ. ಎಂಇಎಸ್ ಸೇರಿದಂತೆ ಯಾವುದೇ ಸಂಘಟನೆಗಳು ಇರಲಿ, ಅಂತಹ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು. ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದರು.