ಬೆಳಗಾವಿ: ವಿವಾದಿತ ಮತಾಂತರ ನಿಷೇಧ ವಿಧೇಯಕ ಮುಂದಿನ ವಾರ ಮಂಡನೆಯಾಗುವುದು ಬಹುತೇಕ ಖಚಿತವಾಗಿದೆ. ಪ್ರತಿ ಪಕ್ಷಗಳ ವಿರೋಧದ ಮಧ್ಯೆ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಬಿಜೆಪಿ ಸರ್ಕಾರ ಸರ್ವ ಸನ್ನದ್ಧವಾಗಿದೆ. ಈಗಾಗಲೇ ವಿಧೇಯಕದ ಕರಡು ಸಿದ್ಧಗೊಂಡಿದ್ದು, ಸೋಮವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಅನುಮೋದನೆಗೊಳ್ಳುವ ಸಾಧ್ಯತೆ ಇದೆ.
ಮತಾಂತರ ನಿಷೇಧ ವಿಧೇಯಕ ಸದ್ಯ ಬಹು ಚರ್ಚಿತ ವಿಚಾರ. ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆ ವಿಧೇಯಕ ಮಂಡಿಸಲು ಆಡಳಿತ ಪಕ್ಷ ರೆಡಿಯಾಗಿದೆ. ಈಗಾಗಲೇ ಕರಡು ಸಿದ್ಧವಾಗಿದ್ದು, ವಿಧೇಯಕದಲ್ಲಿ ಹಲವು ಕಠಿಣ ನಿಯಮಗಳನ್ನು ಸೇರಿಸಲಾಗಿದೆ. ಮತಾಂತರಕ್ಕೆ ಕಡಿವಾಣ ಹಾಕುವುದರ ಜೊತೆಗೆ ಲವ್ ಜಿಹಾದ್ಗೂ ನಿಯಂತ್ರಣ ಹಾಕುವ ಇರಾದೆ ಸರ್ಕಾರದ್ದಾಗಿದೆ. ಒಂದೇ ಬಿಲ್ನಲ್ಲಿ ಎರಡು ಅಂಶಗಳನ್ನು ಸೇರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಉದ್ದೇಶಿತ ಮತಾಂತರ ನಿಷೇಧ ವಿಧೇಯಕದಲ್ಲಿನ ಅಂಶ:
- ಭಾರತ ಸಂವಿಧಾನದ ಪರಿಚ್ಛೇದ 26ರ ಅನ್ವಯದಂತೆ ಸಿದ್ಧಗೊಂಡಿರುವ ವಿಧೇಯಕ ಇದಾಗಿದೆ. ಬಲವಂತದ ಮತಾಂತರ ಶಿಕ್ಷಾರ್ಹ ಅನ್ನೋ ಪರಿಚ್ಛೇದ ಪ್ರಕಾರವೇ ವಿಧೇಯಕ ಸಿದ್ಧ ಪಡಿಸಲಾಗಿದೆ. ಅದರಂತೆ ಕಾನೂನು ಬಾಹಿರ ಮತಾಂತರ ನಿಷಿದ್ಧವಾಗಿದೆ. ಯಾವುದೇ ವ್ಯಕ್ತಿ ಅಥವಾ ಜನ ಸಮುದಾಯವನ್ನು ಬಲವಂತವಾಗಿ ಮತಾಂತರ ಮಾಡುವಂತಿಲ್ಲ.
- ಯಾವುದೇ ವ್ಯಕ್ತಿ ಮತಾಂತರ ಹೊಂದಬೇಕಾದರೆ ಸಕ್ಷಮ ಪ್ರಾಧಿಕಾರವಾಗಿರುವ ಜಿಲ್ಲಾಧಿಕಾರಿಗಳ ಬಳಿ 2 ತಿಂಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.
- ಮತಾಂತರ ಆಗಲು ಬಯಸುವ ವ್ಯಕ್ತಿಯ ಖಾಸಗಿತನವನ್ನು ಕಾಪಾಡಲು ಮತ್ತು ಆತನ/ ಆಕೆಯ ಧಾರ್ಮಿಕ ಹಕ್ಕನ್ನು ಕಾಪಾಡಲು ಮತಾಂತರ ಪ್ರಕ್ರಿಯೆಯನ್ನು ಗೌಪ್ಯವಾಗಿಡುವಂತಿಲ್ಲ.
- ಮತಾಂತರ ನಿಷೇಧ ಕಾಯ್ದೆ ಅಧಿನಿಯಮಗಳ ಪ್ರಕಾರ ಬಲವಂತದ ಮತಾಂತರ ಮಾಡುವ ಇಲ್ಲವೇ ಮತಾಂತರಕ್ಕೆ ಪ್ರಚೋದನೆ ನೀಡುವ ವ್ಯಕ್ತಿಯನ್ನು ಬಂಧಿಸಲು ಅವಕಾಶವಿದೆ. ಬಂಧಿತನಾಗುವ ವ್ಯಕ್ತಿಗೆ ಜಾಮೀನು ಪಡೆಯಲು ಅವಕಾಶ ಇಲ್ಲದಂತೆ, ಜಾಮೀನುರಹಿತ ಅಂತ ಪರಿಗಣಿಸುವುದು.
- ಮತಾಂತರಗೊಳ್ಳುವ ಪ್ರಕ್ರಿಯೆ ಯಾವುದೇ ಧಾರ್ಮಿಕ ಕಟ್ಟಡಗಳು, ಪ್ರಾರ್ಥನಾ ಕೇಂದ್ರಗಳಲ್ಲಿ ಮಾಡುವಂತಿಲ್ಲ. ಮತಾಂತರ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆಯುತ್ತಿದ್ದಲ್ಲಿ, ಅಂತಹ ನಿಗದಿತ ಪ್ರಕ್ರಿಯೆಯನ್ನು ನ್ಯೂಟ್ರಲ್ ಪ್ರದೇಶ, ತಟಸ್ಥ ಪ್ರದೇಶದಲ್ಲಿ ಮಾಡುವುದು ಕಡ್ಡಾಯ.
- ಪ್ರೀತಿಸಿ ಬಳಿಕ ವಿವಾಹ ಆಗಿ ನಂತರ ಮತಾಂತರ ಮಾಡುವುದಕ್ಕೂ ಕಡಿವಾಣ ಹಾಕುವ ಅಂಶ ಸೇರಿಸುವ ಸಾಧ್ಯತೆ. ವಿವಾಹದ ಬಳಿಕ ಮತಾಂತರ ಮಾಡದಂತೆ ಕಾನೂನು ತರಲು ಸರ್ಕಾರ ಚಿಂತನೆ.
- ಮತಾಂತರ ಆಗುವ ಕುಟುಂಬದ ಯಾವುದೇ ವ್ಯಕ್ತಿಯ ತಕರಾರು ಇದ್ದರೆ ಡಿಸಿಗೆ ತಿಳಿಸಬೇಕು. ಡಿಸಿ ಅದರ ಸತ್ಯಾನುಸತ್ಯತೆ ತಿಳಿದು ಅನುಮತಿ ಕೊಡಬೇಕೋ ಬೇಡವೋ ಎಂದು ತೀರ್ಮಾನ ಮಾಡುತ್ತಾರೆ.
- ಎಸ್ ಸಿ ವ್ಯಕ್ತಿ ಮತಾಂತರ ಆದರೆ, ಆ ಕ್ಷಣದಿಂದ ಆ ವ್ಯಕ್ತಿಗೆ ಮೀಸಲಾತಿ ಆಧಾರದಲ್ಲಿ ಸಿಗುವ ಸರ್ಕಾರಿ ಸೇವೆಗಳು ಕಡಿತದ ಪ್ರಸ್ತಾವನೆ.
- ವಿಧೇಯಕದಲ್ಲಿ ಬಲವಂತದ ಮತಾಂತರ ಆಗಿಲ್ಲ ಎಂಬುದನ್ನು ಸಾಬೀತು ಪಡಿಸುವ ಹೊಣೆಗಾರಿಕೆ ಮತಾಂತರಗೊಂಡ ವ್ಯಕ್ತಿ, ಆಯೋಜಿಸಿದ ಸಂಸ್ಥೆ, ಸಂಘಟನೆ ಮೇಲಿರಲಿದೆ.
- ಕಾನೂನು ಬಾಹಿರವಾಗಿ ಮತಾಂತರ ಮಾಡಿದವರನ್ನು 1-5 ವರ್ಷ ಸೆರೆವಾಸ ಶಿಕ್ಷೆ ವಿಧಿಸುವ ಹಾಗೂ ಒಂದು ವೇಳೆ ಬಲವಂತದ ಮತಾಂತರಗೊಂಡ ವ್ಯಕ್ತಿ ಮಹಿಳೆ, ಮೈನರ್, ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸೇರಿದವರಾದರೆ ಶಿಕ್ಷೆಯ ಪ್ರಮಾಣ ಗರಿಷ್ಠ 10 ವರ್ಷದವರೆಗೆ ಏರಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಹೆದರಿಸಿ ಮತಾಂತರ ಮಾಡುವವರು ಭಯ ಪಡಬೇಕು, ಸ್ವಯಿಚ್ಛೆಯಿಂದ ಸೇರಲಿ ತೊಡಕಿಲ್ಲ : ಸಿ ಟಿ ರವಿ