ಬೆಳಗಾವಿ: ನಗರ, ಪಟ್ಟಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಆಗುತ್ತಿವೆ. ಆದರೆ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಉಲ್ಭಣಗೊಂಡಿದೆ. ಕೋವಿಡ್ ನಿಯಂತ್ರಣಕ್ಕೆ ನಾವೀಗ ಗ್ರಾಮೀಣ ಭಾಗದ ಮೇಲೆ ಫೋಕಸ್ ಮಾಡಬೇಕಿದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾದರೆ ಸಾಕಷ್ಟು ಪ್ರಮಾಣದಲ್ಲಿ ತೊಂದರೆ ಆಗಲಿದೆ. ಹೀಗಾಗಿ ತಕ್ಷಣವೇ ಸೋಂಕನ್ನು ನಿಯಂತ್ರಿಸಬೇಕಿದೆ. ಕೊರೊನಾ ನಿಯಂತ್ರಣ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ್ದೇನೆ. ತಾಲೂಕು, ಹೋಬಳಿ ಮಟ್ಟದಲ್ಲಿ ಕೋವಿಡ್ ಕೇರ್ ಸ್ಥಾಪಿಸಲು ಸೂಚಿಸಲಾಗಿದೆ. ಸೋಂಕಿತರನ್ನು ಮನೆಯಲ್ಲಿ ಇರಿಸದೇ ಕೋವಿಡ್ ಕೇರ್ ಸೆಂಟರ್ಗೆ ರವಾನಿಸಲಾಗುವುದು.
ಗ್ರಾಮೀಣ ಪ್ರದೇಶದ ಮನೆ ಮನೆಗೆ ಹೋಗಿ ಕೋವಿಡ್ ಟೆಸ್ಟ್ ಮಾಡಲು ಸೂಚಿಸಿದ್ದೇನೆ. ಜನತಾ ಕರ್ಪ್ಯೂ ಆದೇಶ ನಗರಕ್ಕಷ್ಟೆ ಅಲ್ಲ, ಗ್ರಾಮೀಣ ಭಾಗಕ್ಕೂ ಇದೆ. ಸರ್ಕಾರದ ಆದೇಶ ಗ್ರಾಮೀಣ ಭಾಗದಲ್ಲಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು. ಲಾಕ್ಡೌನ್ ವಿಸ್ತರಣೆ ಬಗ್ಗೆ ರಾಜ್ಯ ಸರ್ಕಾರವೇ ನಿರ್ಧಾರ ಕೈಗೊಳ್ಳಲಿದೆ ಎಂದರು.