ಬೆಂಗಳೂರು: ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ರಾಜ್ಯದ ಕೈಗಾರಿಕೆಗಳು ಮುಚ್ಚಿ ಪ್ರತಿಭಟಿಸಲಾಗಿದೆ. ಕೋವಿಡ್‍ನಿಂದಾಗಿ ರಾಜ್ಯದಲ್ಲಿ ಶೇ.60ರಷ್ಟು ಕೈಗಾರಿಕೆಗಳು ಕಾರ್ಯ ಸ್ಥಗಿತಗೊಳಿಸಿವೆ ಎಂದು ಜೆಡಿಎಸ್ ಶಾಸಕ ಆರ್.ಮಂಜುನಾಥ್ ವಿಧಾನಸಭೆಯಲ್ಲಿ ಇಂದು ಪ್ರಸ್ತಾಪ ಮಾಡಿದರು.
ಶೂನ್ಯವೇಳೆಯಲ್ಲಿ ಇಂದು ವಿಷಯ ಪ್ರಸ್ತಾಪಿಸಿದ ಅವರು, ಆಮದು ಸುಂಕ ಇಳಿಸಬೇಕು. ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ಶೇ.50ರಷ್ಟು ಕೈಗಾರಿಕೆಗಳು ಮುಚ್ಚಿವೆ. ಇಲ್ಲಿ 10 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಉಪ್ಪು ಇತರ ಕಚ್ಚಾವಸ್ತು, ಇಂಧನ ಬೆಲೆ ಇಳಿಸುವಂತೆ ಆಗ್ರಹಿಸಿದರು.
ಸಣ್ಣ ಕೈಗಾರಿಕೆಗಳಿಗೆ ಸಾಲ ನೀಡಬೇಕು. ಪೀಣ್ಯದಲ್ಲಿ ರಸ್ತೆಯೂ ಸರಿಯಾಗಿಲ್ಲ, ರಸ್ತೆ ಗುಂಡಿ ಮುಚ್ಚಿ, ಬೀದಿ ದೀಪಗಳಿಲ್ಲ, ಸೂಕ್ತ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. 5 ಲಕ್ಷ ಮಹಿಳೆಯರು ಸಿದ್ದ ಉಡುಪು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಎಸ್‍ಟಿ ಶುಲ್ಕವನ್ನು ಇಳಿಸಬೇಕೆಂದು ಒತ್ತಾಯಿಸಿದರು.
ನಂತರ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಮಾತನಾಡಿ, ಜಿಎಸ್‍ಟಿ ಶುಲ್ಕ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜಿಎಸ್‍ಟಿ ಕೌನ್ಸಿಲ್‍ನಲ್ಲಿ ಪ್ರಸ್ತಾಪಿಸಲು ಮನವಿ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ 100 ಠಾಣೆ ನಿರ್ಮಾಣ: ಕಟ್ಟಡವಿಲ್ಲದ ಪ್ರಮುಖ ಪೊಲೀಸ್ ಠಾಣೆಗಳಿಗೆ ನೂತನ ಕಟ್ಟಡ ಮಂಜೂರು ಮಾಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 100 ಠಾಣೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಹೊಸ ಪೊಲೀಸ್ ಠಾಣೆ ನಿರ್ಮಾಣ ಮಾಡಲಾಗುತ್ತಿದೆ. ಉಪ ಠಾಣೆಗಳ ನಿರ್ಮಾಣದ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು. ಪೊಲೀಸ್ ಗೃಹ 2025ರ ಯೋಜನೆಯಡಿ ನೂತನ ವಸತಿ ಗೃಹಗಳ ನಿರ್ಮಾಣಕ್ಕಾಗಿ ಸೊರಬ ಮತ್ತು ಅನವಟ್ಟಿ ಠಾಣಾ ವ್ಯಾಪ್ತಿಯಲ್ಲಿ ತಲಾ 12 ವಸತಿಗೃಹಗಳನ್ನು ನಿರ್ಮಿಸಲು ಪರಿಗಣಿಸಲಾಗಿದೆ.
ತಾಳಗುಪ್ಪ ಉಪಠಾಣೆ ವ್ಯಾಪ್ತಿಯಲ್ಲಿ 4 ವಸತಿ ಗೃಹಗಳಿದ್ದು, ಸುಸ್ಥಿತಿಯಲ್ಲಿವೆ. ಹೀಗಾಗಿ ಹೆಚ್ಚುವರಿ ವಸತಿ ಗೃಹಗಳ ಅವಶ್ಯಕತೆ ಇರುವುದಿಲ್ಲ. ಸೊರಬ ಮತ್ತು ಆನವಟ್ಟಿ ಪೊಲೀಸ್ ಠಾಣೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸ್ಥಳಾಂತರ ಮಾಡುವುದಿಲ್ಲ ಎಂದರು.