ಬೆಳಗಾವಿ: ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ನಿರ್ದೇಶನದಂತೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 75 ಜನರಿಗೆ ಹಾಗೂ ಎರಡನೇ ಹಂತದಲ್ಲಿ 175 ಜನರ ಮೇಲೆ ಕೊರೊನಾ ಲಸಿಕೆ ಡ್ರೈ ರನ್ ಪ್ರಯೋಗ ಮಾಡಲಾಯಿತು.
ಸಾರ್ವತ್ರಿಕವಾಗಿ ಕೊರೊನಾ ಲಸಿಕೆ ನೀಡುವ ಮುಂಚೆ, ಆರೋಗ್ಯ ಇಲಾಖೆಯ ನಿರ್ದೇಶನದಂತೆ ಜಿಲ್ಲೆಯಲ್ಲಿ ಈಗಾಗಲೇ ನೋಂದಾಯಿತ ಆರೋಗ್ಯ ಇಲಾಖೆಯ 30 ಸಾವಿರ ಸಿಬ್ಬಂದಿಗೆ ಕೊರೊನಾ ಲಸಿಕೆ ನೀಡುವ ಕುರಿತು ಮೂರು ಹಂತದಲ್ಲಿ ಅಣಕು ಪ್ರದರ್ಶನ ನೀಡಲಾಗುತ್ತಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆ, ಕೆಎಲ್ಇ ಹಾಗೂ ಲೇಕ್ ವ್ಯೂ ಆಸ್ಪತ್ರೆ, ಅಥಣಿ, ಯಕ್ಸಂಬಾ, ನಿಪ್ಪಾಣಿ ಮತ್ತು ಕೊಣ್ಣೂರಿನಲ್ಲಿ ಸೇರಿದಂತೆ ಒಟ್ಟು ಏಳು ಕಡೆ ಎರಡನೇ ಹಂತದ ಡ್ರೈ ರನ್ ನಡೆಯುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಡಿಹೆಚ್ಒ ಶಶಿಕಾಂತ್ ಮುನ್ಯಾಳ, ಸರ್ಕಾರದ ನಿರ್ದೇಶನ ಬಂದ ತಕ್ಷಣ ಲಸಿಕೆ ನೀಡುವ ಪ್ರಕ್ರಿಯೆ ಆರಂಭ ಮಾಡುತ್ತೇವೆ. ಪ್ರತಿ ಅಣಕು ಪ್ರದರ್ಶನ ಕೇಂದ್ರದಲ್ಲಿ 25 ಜನರ ಮೇಲೆ ಡೆಮೋ ಮಾಡಲಾಗುತ್ತಿದೆ. ಡ್ರೈ ರನ್ನಲ್ಲಿ ಭಾಗವಹಿಸಿರುವವರು ಕೋವಿನ್ ಆ್ಯಪ್ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿರುತ್ತಾರೆ ಎಂದರು.