ಬೆಳಗಾವಿ: ವಿದೇಶದಿಂದ ಕಲ್ಲಿದ್ದಲು ಆಮದನ್ನು ಸಂಪೂರ್ಣವಾಗಿ ನಿಲ್ಲಿಸಿ ದೇಶದಲ್ಲಿ ಸ್ವದೇಶಿ ಕಲ್ಲಿದ್ದಲನ್ನೇ ಬಳಸಲು ನಿರ್ಧರಿಸಿದ್ದೇವೆ ಎಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
'ಕಲ್ಲಿದ್ದಲು ಕೊರತೆ ಆಗಿದ್ದು ನಿಜ'
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀವ್ರ ಮಳೆ ಹಾಗೂ ಕಲ್ಲಿದ್ದಲಿನ ಆಮದು ದರ ಹೆಚ್ಚಾಗಿದ್ದಕ್ಕೆ ದೇಶದಲ್ಲಿ ಕಲ್ಲಿದ್ದಲು ಕೊರತೆ ಆಗಿತ್ತು. ಈ ಸಮಸ್ಯೆಯನ್ನು ನಾವು ಅವಕಾಶವನ್ನಾಗಿ ತೆಗೆದುಕೊಂಡಿದ್ದೇವೆ. ದೇಶದಲ್ಲೀಗ ಸ್ವದೇಶಿ ಕಲ್ಲಿದ್ದಲನ್ನೇ ಅಪಾರ ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ.
ಹೀಗಾಗಿ ಕಲ್ಲಿದ್ದಲು ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲು ತೀರ್ಮಾನಿಸಿದ್ದೇವೆ. ನಮ್ಮಲ್ಲಿ ಅಪಾರ ಪ್ರಮಾಣದ ಕಲ್ಲಿದ್ದಲು ಭಂಡಾರಗಳಿವೆ ಎಂದರು.
ಧಾರವಾಡ-ಬೆಳಗಾವಿ ರೈಲು ಯೋಜನೆ ವಿಚಾರ:
ಕಿತ್ತೂರಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಬದ್ಧವಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಅಪೇಕ್ಷೆಯನ್ನು ನಾವು ಈಡೇರಿಸುತ್ತೇವೆ. ಧಾರವಾಡ-ಬೆಳಗಾವಿ ರೈಲು ಯೋಜನೆ ಈ ಅವಧಿಯಲ್ಲಿ ಮುಗಿಯಬೇಕು ಎಂಬ ಆಶಯ ನನ್ನದು. ರಾಜ್ಯ ಸರ್ಕಾರ ತಕ್ಷಣವೇ ಭೂಸ್ವಾಧೀನ ಕಾರ್ಯ ಆರಂಭಿಸಬೇಕು. ಶೇ. 80 ರಷ್ಟು ಭೂಮಿ ನೀಡಿದರೂ ನಾವು ಕೆಲಸ ಆರಂಭಿಸುತ್ತೇವೆ ಎಂದು ಹೇಳಿದರು.
ಹುಬ್ಬಳ್ಳಿ-ಬೆಂಗಳೂರು ಜೋಡಿ ಮಾರ್ಗ ನಿರ್ಮಾಣ ಕೂಡ ಆಗಲಿದೆ. ಆಗ ಈ ಮಾರ್ಗದಲ್ಲಿ ವಂದೇ ಮಾತರಂ ರೈಲು ಓಡಿಸಲು ನಾವು ಬದ್ಧರಿದ್ದೇವೆ. ಧಾರವಾಡ-ಬೆಳಗಾವಿ ರೈಲು ಮಾರ್ಗವಾದರೆ ಅಂದಾಜು 4 ಗಂಟೆ ಪ್ರಯಾಣದ ಸಮಯ ಉಳಿತಾಯವಾಗಲಿದೆ ಎಂದರು.
ಕಿತ್ತೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಡಿಕೆ ಇದೆ. ರಾಜ್ಯ ಸರ್ಕಾರ ಭೂಮಿ ಕೊಟ್ಟರೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ವಹಿಸುತ್ತೇವೆ. ಅಲ್ಲದೇ ಇಲ್ಲಿಗೆ ವಿಮಾನಗಳ ರಿಪೇರಿ-ಪಾರ್ಕಿಂಗ್ ವ್ಯವಸ್ಥೆ ತರಲು ಪ್ರಯತ್ನಿಸುತ್ತೇವೆ.
ಪ್ರಸ್ತುತ ವಿದೇಶಗಳಲ್ಲಿ ವಿಮಾನಗಳ ತಯಾರಿಕೆ ಆಗುತ್ತಿವೆ. ಇದರಿಂದ ಭಾರತದಲ್ಲೇ ವಿಮಾನ ತಯಾರಿಕೆ ಘಟಕ ಸ್ಥಾಪನೆಗೆ ಅನುಕೂಲ ಆಗಲಿದೆ. ಅಲ್ಲದೇ ಬೆಳಗಾವಿ-ಧಾರವಾಡ-ಹುಬ್ಬಳ್ಳಿಯನ್ನು ತ್ರಿವಳಿ ನಗರ ಮಾಡಲು ಕೇಂದ್ರ ಸರ್ಕಾರ ಬದ್ಧವಿದೆ ಎಂದರು.
ಉಪ ಚುನಾವಣೆ: ಡಿಕೆಶಿ, ಸಿದ್ದರಾಮಯ್ಯಗೆ ತಿರುಗೇಟು
ಉಪಚುನಾವಣೆಯಲ್ಲಿ ಬಿಎಸ್‌ವೈ ಅಡ್ರೆಸ್ ಇಲ್ಲ ಎಂಬ ಡಿಕೆಶಿ ಹೇಳಿಕೆಗೆ ಸಚಿವ ಜೋಶಿ ತಿರುಗೇಟು ಕೊಟ್ಟರು. ಬಿಎಸ್‌ವೈ ಅಡ್ರೆಸ್ ಇಲ್ಲ ಎನ್ನುವ ಕಾಂಗ್ರೆಸ್ ನಾಯಕರೇ ಅವರ ಹೆಸರನ್ನು ಜಪಿಸುತ್ತಿದ್ದಾರೆ. ರಾಜ್ಯದ ಹಾಗೂ ಪಕ್ಷದ ಹಿರಿಯ ನಾಯಕರಲ್ಲಿ ಬಿಎಸ್‌ವೈ ಒಬ್ಬರು. ಎರಡೆರಡು ದಿನ ಬಿಎಸ್‌ವೈ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದಾರೆ.
ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಪೈಪೋಟಿ ನಡೆಯುತ್ತಿದೆ. ಡಿಕೆಶಿಗೆ ಸಂಬಂಧಿಸಿದ ವಿಡಿಯೋವನ್ನು ಸಲೀಂ ಮೂಲಕ ಸಿದ್ದರಾಮಯ್ಯನವರೇ ಬಿಡುಗಡೆ ಮಾಡಿಸಿದ್ದಾರೆ. ಅವರ ಪೈಪೋಟಿ ನಡುವೆ ಬಿಎಸ್‌ವೈ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ಕಾಂಗ್ರೆಸ್ ನಾಯಕರು ಮೊದಲು ಅವರೊಳಗಿನ ಸಮಸ್ಯೆ ಸರಿಮಾಡಿಕೊಳ್ಳಬೇಕು. ಮುಖ್ಯಮಂತ್ರಿ ಹುದ್ದೆಯನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಟ್ಟಿರುವ ಬಗ್ಗೆ ಬಿಎಸ್‌ವೈ ಹಲವು ಸಲ ಹೇಳಿದ್ದಾರೆ. ಬೊಮ್ಮಾಯಿ ಅವರನ್ನು ಎಲ್ಲರೂ ಸೇರಿ ಸಿಎಂ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಅಲ್ಪಸಂಖ್ಯಾತರ ಮತ ಸೆಳೆಯಲು ಸಿದ್ದರಾಮಯ್ಯ, ಹೆಚ್ಡಿಕೆ ಆರ್.ಎಸ್.ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸಂಗತಿಯನ್ನು ನಿರ್ಲಕ್ಷಿಸುವುದೇ ಉತ್ತಮ ಎಂಬುದು ನನ್ನ ಅಭಿಪ್ರಾಯ. ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದರು.
ಹೆದ್ದಾರಿ ಮೇಲೆ ನಿಂತು ದುಡ್ಡು ಹಂಚುತ್ತಿದ್ದೇವೆ ಎಂಬುದು ಸುಳ್ಳು. ಚುನಾವಣೆ ಆಯೋಗ, ಮಾಧ್ಯಮಗಳು ಇದ್ದಾವೆ. ಎಲ್ಲರೂ ಸುಮ್ಮನೆ ಕುಳಿತರೆ ಮಾಧ್ಯಮಗಳು ಸುಮ್ಮನೆ ಇರಬೇಕಲ್ಲ?. ದುಡ್ಡು ಹಂಚುತ್ತಿದ್ದರೆ ಇಷ್ಟು ಹೊತ್ತಿಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿತ್ತು. ಚುನಾವಣೆ ಪ್ರಚಾರದ ವೇಳೆ ವೈಯಕ್ತಿಕ ಟೀಕೆಗೆ ಯಾರೂ ಇಳಿಯಬಾರದು. ಪ್ರಧಾನಿ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡುತ್ತಿರುವುದು ದುರಂತ ಎಂದರು.
ಇದನ್ನೂ ಓದಿ: ಬೆಂಗಳೂರು ವಿಭಾಗದ ಮೊದಲ ಕಾರ್ಗೋ ಪಾರ್ಸೆಲ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ