ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಹಿಂದೆಂದೂ ಸಿಗದಷ್ಟು ಪ್ರಾತಿನಿಧ್ಯ ಪ್ರಸ್ತುತ ಸರ್ಕಾರದಲ್ಲಿ ಗಡಿ ಜಿಲ್ಲೆ ಬೆಳಗಾವಿಗೆ ನೀಡಲಾಗುತ್ತಿದೆ. ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರ ಹೊಂದಿರುವ ಬೆಳಗಾವಿ ಇಂದು ರಾಜ್ಯ ರಾಜಕಾರಣದಲ್ಲಿ ಸೂಪರ್ ಪವರ್ ಆಗಿ ಹೊರ ಹೊಮ್ಮುತ್ತಿದೆ. ಜಿಲ್ಲೆಗೆ ಇಷ್ಟೊಂದು ರಾಜಕೀಯ ಪ್ರಾತಿನಿಧ್ಯ ಕೊಡುತ್ತಿರುವ ಕಮಲ ನಾಯಕರ ತಂತ್ರವೇ ಬಲು ರೋಚಕ.
ಉಪಮುಖ್ಯಮಂತ್ರಿ ಒಳಗೊಂಡಂತೆ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಯ ನಾಲ್ವರು ಕ್ಯಾಬಿನೆಟ್ ದರ್ಜೆಯ ಮಂತ್ರಿಗಳಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಜೊತೆಗೆ ಸಾರಿಗೆ ಇಲಾಖೆ, ರಮೇಶ ಜಾರಕಿಹೊಳಿಗೆ ಜಲಸಂಪನ್ಮೂಲ, ಶಶಿಕಲಾ ಜೊಲ್ಲೆ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶ್ರೀಮಂತ ಪಾಟೀಲ ಅವರಿಗೆ ಜವಳಿ ಖಾತೆ ಸಿಕ್ಕಿದೆ. ಸುರೇಶ್ ಅಂಗಡಿ ಅವರಿಗೆ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ.
![belagavi-is-the-superpower-in-state-politics](https://etvbharatimages.akamaized.net/etvbharat/prod-images/8778176_bel.jpg)
ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ, ಸವದತ್ತಿ ಶಾಸಕ ಆನಂದ ಮಾಮನಿ ಅವರಿಗೆ ಉಪಸಭಾಪತಿ ಸ್ಥಾನ ನೀಡಲಾಗಿದೆ. ಬಿಜೆಪಿ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ, ರಾಯಭಾಗ ಶಾಸಕ ದುರ್ಯೋಧನ ಐಹೊಳೆಗೆ ಖಾದಿ ಗ್ರಾಮೋದ್ಯೋಗ ಮಂಡಳಿ ಹಾಗೂ ಕುಡಚಿ ಶಾಸಕ ಪಿ.ರಾಜೀವ ಅವರಿಗೆ ತಾಂಡಾ ಅಭಿವೃದ್ಧಿ ಮಂಡಳಿ ಜವಾಬ್ದಾರಿ ವಹಿಸಲಾಗಿದೆ.
![belagavi-is-the-superpower-in-state-politics](https://etvbharatimages.akamaized.net/etvbharat/prod-images/8778176_belgass.jpg)
ಮಹಾಂತೇಶ ಕವಟಗಿಮಠ ಅವರಿಗೆ ಪರಿಷತ್ ಸರ್ಕಾರದ ಮುಖ್ಯಸಚೇತಕ ಜವಾಬ್ದಾರಿ ಇದೆ. ವಿಶೇಷ ಅಂದ್ರೆ ಶಾಸಕರಲ್ಲದಿದ್ದರೂ ಸಿಎಂ ಯಡಿಯೂರಪ್ಪನವರ ಆಪ್ತರು ಎನ್ನುವ ಕಾರಣಕ್ಕೆ ಶಂಕರಗೌಡ ಪಾಟೀಲ್ ಅವರಿಗೆ ದೆಹಲಿ ವಿಶೇಷ ಪ್ರತಿನಿಧಿ, ಗೂಳಪ್ಪ ಹೊಸಮನಿ ಅವರಿಗೆ ಬುಡಾ ಅಧ್ಯಕ್ಷ ಸ್ಥಾನ, ಮುಖ್ತಾರ್ ಪಠಾಣ್ ಅವರಿಗೆ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಸ್ಥಾನ ವಹಿಸಲಾಗಿದೆ.
![belagavi-is-the-superpower-in-state-politics](https://etvbharatimages.akamaized.net/etvbharat/prod-images/8778176_belgaw.jpg)
ಇಷ್ಟೆಲ್ಲ ಪ್ರಾತಿನಿಧ್ಯ ಮಧ್ಯೆ ರಾಜ್ಯಸಭೆ ಹಾಗೂ ವಿಧಾನಪರಿಷತ್ ನಾಮನಿರ್ದೇಶನದ ವೇಳೆ ಕಮಲ ನಾಯಕರು ಬೆಳಗಾವಿಯನ್ನು ಮರೆತಿಲ್ಲ. ಈರಣ್ಣ ಕಡಾಡಿ ಅವರನ್ನು ರಾಜ್ಯಸಭೆಗೆ ಹಾಗೂ ಆರ್‍ಸಿಯು ಪ್ರಾಧ್ಯಾಪಕರಾಗಿದ್ದ ಡಾ.ಸಂಬಣ್ಣ ತಳವಾರ ಅವರನ್ನು ಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
![belagavi-is-the-superpower-in-state-politics](https://etvbharatimages.akamaized.net/etvbharat/prod-images/8778176_belagavi.jpg)
ಬೆಳಗಾವಿಯ ಆದ್ಯತೆಗೆ ಮೋದಿ, ಶಾ ತಂತ್ರ!
ರಾಜಕೀಯ ಪ್ರಾತಿನಿಧ್ಯ ವಿಚಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಈವರೆಗೆ ರಾಜಧಾನಿ ಬೆಂಗಳೂರಿಗೆ ಸಿಂಹಪಾಲು ಪಡೆದುಕೊಳ್ಳುತ್ತಿತ್ತು. ಇದೀಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರುವ ಕಾರಣ ಬೆಂಗಳೂರು ನಂತರ ಬೆಳಗಾವಿಗೆ ಆದ್ಯತೆ ನೀಡಲಾಗುತ್ತಿದೆ. ಬೆಂಗಳೂರು ನಂತ್ರ ಅತಿಹೆಚ್ಚು ವಿಧಾನಸಭೆ ಕ್ಷೇತ್ರ ಹೊಂದಿರುವ ಬೆಳಗಾವಿಯನ್ನು ರಾಜಕೀಯ ಶಕ್ತಿ ಕೇಂದ್ರ ಮಾಡಬೇಕು ಎಂಬುದು ಕಮಲ ನಾಯಕರ ತಂತ್ರ.
ದೊಡ್ಡ ಜಿಲ್ಲೆ ಎಂಬ ಕಾರಣಕ್ಕೆ ಬೆಳಗಾವಿಗೆ ಪ್ರಾತಿನಿಧ್ಯ ಸಿಗ್ತಿವೆ ಎನ್ನುವುದಕ್ಕಿಂತ ಒಂದೆಡೆ ಮೋದಿ, ಶಾ, ಮತ್ತೊಂದೆಡೆ ಬಿ ಎಸ್ ಯಡಿಯೂರಪ್ಪ ಹಾಗೂ ಇನ್ನೊಂದೆಡೆ ಆರ್‍ಎಸ್‍ಎಸ್ ತಮ್ಮವರಿಗೆ ಆದ್ಯತೆ ಕೊಡಲು ಮುಂದಾಗುತ್ತಿದ್ದಾರೆ. ಹೈಕಮಾಂಡ್ ಕೃಪೆಯಿಂದ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಮಂತ್ರಿ ಹಾಗೂ ಈರಣ್ಣ ಕಡಾಡಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ರಮೇಶ ಜಾರಕಿಹೊಳಿ, ಶ್ರೀಮಂತ್ ಪಾಟೀಲ ಜತೆಗೆ ಯಡಿಯೂರಪ್ಪನವರ ಕೃಪೆಯಿಂದ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್, ಆನಂದ ಮಾಮನಿ ಉಪಸಭಾಪತಿ ಹಾಗೂ ಶಾಸಕರಲ್ಲದಿದ್ದರೂ ಶಂಕರಗೌಡ ಪಾಟೀಲ ಅವರಿಗೆ ದೆಹಲಿ ವಿಶೇಷ ಪ್ರತಿನಿಧಿ ಜವಾಬ್ದಾರಿ ವಹಿಸಲಾಗಿದೆ. ಆರ್‍ಎಸ್‍ಎಸ್ ಕೃಪೆಯಿಂದ ಡಾ.ಸಂಬಣ್ಣ ತಳವಾರ ಅವರು ಪರಿಷತ್ ನಾಮನಿರ್ದೇಶನಗೊಂಡಿದ್ದಾರೆ.
ಸ್ಥಾನಮಾನ ಪಡೆದಿರುವ ಇಷ್ಟೆಲ್ಲ ಜನ ರಾಜ್ಯವ್ಯಾಪಿ ಪಕ್ಷ ಸಂಘಟಿಸುವ ಅರ್ಹತೆ ಹೊಂದಿಲ್ಲ. ಕ್ಷೇತ್ರಕ್ಕೆ ಹಾಗೂ ಅತಿಹೆಚ್ಚು ಅಂದ್ರೆ ಜಿಲ್ಲೆಗೆ ಸೀಮಿತ ಎಂಬಂತೆ ಎಲ್ಲರೂ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸಿಎಂ ಯಡಿಯೂರಪ್ಪ ಹಾಗೂ ಆರ್‍ಎಸ್‍ಎಸ್ ಮುಖಂಡರು ತಮ್ಮ ತಮ್ಮ ನಂಬಿಕಸ್ಥರಿಗೆ ಪ್ರಾತಿನಿಧ್ಯ ಕೊಡಿಸಿದ್ದಾರಷ್ಟೇ ಎನ್ನುತ್ತಾರೆ ಹಿರಿಯ ಪತ್ರಕರ್ತ ಹೃಷಿಕೇಶ ಬಹದ್ದೂರ ದೇಸಾಯಿ.
ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿ : ಹಿಂದೆಂದೂ ಸಿಗದಷ್ಟು ರಾಜಕೀಯ ಪ್ರಾತಿನಿಧ್ಯ ಬೆಳಗಾವಿಗೆ ಸಿಕ್ಕಿರುವ ಕಾರಣ ಈ ಎಲ್ಲರೂ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯ. ಕೇಂದ್ರ ಸಚಿವರನ್ನೊಳಗೊಂಡಂತೆ ಜಿಲ್ಲೆಯಲ್ಲಿ ಐವರು ಸಚಿವರಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಲವರಿಗೆ ಸಿಕ್ಕಿದೆ. ಸ್ಥಾನಮಾನದ ಖುಷಿ ಪಡುವ ಜೊತೆಗೆ ಈ ಎಲ್ಲರೂ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿದೆ.