ಬೆಳಗಾವಿ: ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿ ಸದ್ಯಕ್ಕೆ ಕ್ವಾರಂಟೈನ್ನಲ್ಲಿ ಇರುವ ಯಾವುದೇ ವ್ಯಕ್ತಿಯನ್ನು ಎಂತಹದೇ ಸಂದರ್ಭದಲ್ಲೂ ಇನ್ನೊಬ್ಬರ ಜತೆ ಬೆರೆಯದಂತೆ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಯೊಬ್ಬರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವ ಒಂದೇ ಕುಟುಂಬದ ಮೂವರು ಸದಸ್ಯರಲ್ಲೂ ಸೋಂಕು ಕಂಡುಬಂದಿರುವುದರಿಂದ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರದಂತೆ ತಿಳಿಸಿದರು.
ಈಗಾಗಲೇ ಬಿಡುಗಡೆಯಾಗಿರುವ ಪಡಿತರ ಧಾನ್ಯವನ್ನು ನಾಳೆ ಸಂಜೆಯೊಳಗೆ ಸಂಪೂರ್ಣವಾಗಿ ವಿತರಿಸಬೇಕು. ಇದಲ್ಲದೇ ತಾಲೂಕು ಮತ್ತಿತರ ಕೇಂದ್ರಗಳಲ್ಲಿ ಜನಸಂದಣಿ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಫಾಗಿಂಗ್, ಪೌಡರ್ ಸಿಂಪಡಣೆ ಕಡ್ಡಾಯವಾಗಿ ಮಾಡಬೇಕು ಎಂದರು.
ಜಿಪಂ ಸಿಇಒ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಕಂಟೈನ್ಮೆಂಟ್ ಝೋನ್ಗಳಲ್ಲಿರುವ ಮನೆಗಳು ಸರ್ವೇ ನಡೆಸಿ, ಅವುಗಳ ಸಂಖ್ಯೆಗೆ ಅನುಗುಣವಾಗಿ ತಂಡಗಳನ್ನು ರಚಿಸಿಕೊಂಡು ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ ಸೋಂಕು ಲಕ್ಷಣಗಳ ಬಗ್ಗೆ ನಿರಂತರ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ತಿಳಿಸಿದರು.
ಆರೋಗ್ಯ ಮತ್ತಿತರ ಇಲಾಖೆಯ ಸದಸ್ಯರನ್ನು ಒಳಗೊಂಡ ತಂಡವು ಪ್ರತಿ ಮನೆಯಲ್ಲಿ ಇರುವವರ ಸಮಗ್ರ ಮಾಹಿತಿ ಕಲೆಹಾಕಬೇಕು. ಜ್ವರ, ಡಯಾಬಿಟಿಸ್, ರಕ್ತದೊತ್ತಡ, ಉಸಿರಾಟದ ತೊಂದರೆ ಸೇರಿದಂತೆ ಯಾವ ಬಗೆಯ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸಿ ತಕ್ಷಣವೇ ಜಿಲ್ಲಾಮಟ್ಟದ ತಂಡಕ್ಕೆ ಮಾಹಿತಿ ಸಲ್ಲಿಸಬೇಕು. ಇದಲ್ಲದೇ ಜ್ವರ ಅಥವಾ ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದು ಎಚ್ಚರಿಕೆ ನೀಡಿದರು.