ಅಥಣಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕಾರವಧಿಯಲ್ಲೇ ಅಥಣಿ ಪಶು ಮಹಾವಿದ್ಯಾಲಯ ಕಾಲೇಜ್ ಪ್ರಾರಂಭ ಮಾಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿ 'ಈಟಿವಿ ಭಾರತ' ಪ್ರತಿನಿಧಿ ಜೊತೆ ಮಾತನಾಡಿದ ಅವರು, 2009 ರಿಂದ ಈ ಕಾಮಗಾರಿ ನಡಿಯುತ್ತಾ ಬಂದಿದೆ. 2022ರ ಒಳಗಾಗಿ ಈ ಕಾಮಗಾರಿ ಮುಗಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜ್ ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಗೆ ಗೋ ಶಾಲೆ ಮಂಜೂರು ಮಾಡಿ, ಈಗಾಗಲೇ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇದರಲ್ಲಿ 25 ಲಕ್ಷ ರೂ. ಮೊದಲ ಹಂತವಾಗಿ ಬಿಡುಗಡೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ಮೊದಲೇ ಗೋ ಶಾಲೆಗಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ. ಗೋ ಹತ್ಯೆ ಕಾನೂನು ಜಾರಿಯಾದ ಮೇಲೆ ಜಿಲ್ಲೆಗೆ ಒಂದು ಗೋ ಶಾಲೆ ಮಂಜೂರು ಮಾಡಲಾಗಿದೆ. ನಂತರ ತಾಲೂಕಿಗೆ ಮಂಜೂರು ಮಾಡುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರಾಣಿ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಪಶು ಸಂಜೀವಿನಿ ತುರ್ತು ಆ್ಯಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಚಿಕಿತ್ಸೆಗಾಗಿ 1962 ಕರೆ ಮಾಡಿದರೆ ರೈತರ ಮನೆ ಬಾಗಿಲಿಗೆ ಬಂದು ಪಶುಗಳಿಗೆ ಚಿಕಿತ್ಸೆ ಕೊಡಲಾಗುವುದು. ಪಶು ಸಂಗೋಪನೆ ಇಲಾಖೆಯಲ್ಲಿ ಐದು ಹೊಸ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಜೊತೆಗೆ ಅದಷ್ಟು ಬೇಗ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದ್ರು.