ಅಥಣಿ: ಲಾಕ್ಡೌನ್ನಿಂದಾಗಿ ಅಥಣಿ ತಾಲೂಕಿನಲ್ಲಿ ಸಿಲುಕಿರುವ ಹೆಳವರ ಇಪ್ಪತ್ತೆಂಟು ಕುಟುಂಬಗಳ ಸುಮಾರು 300 ಜನ ಸದಸ್ಯರು ಜೀವನಾವಶ್ಯಕ ಸಾಮಗ್ರಿಗಳು ಇಲ್ಲದೆ ಪರದಾಡುತ್ತಿದ್ದಾರೆ.
ಮೂಲತಃ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದವರಾದ ಇವರು ಕಾಯಕದ ಮೇಲೆ ವಿಜಯಪುರ ಜಿಲ್ಲೆಗೆ ಹೋಗುವ ಸಂದರ್ಭ ಲಾಕ್ಡೌನ್ ಆದೇಶದಿಂದ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬಳಿ ಸಿಲುಕಿಕೊಂಡಿದ್ದಾರೆ. 28 ಎತ್ತಿನ ಗಾಡಿಯಲ್ಲಿ 300ಕ್ಕೂ ಅಧಿಕ ಜನರು ಹಲ್ಯಾಳ ಗ್ರಾಮದ ಹನುಮಾನ ನಗರದಲ್ಲಿ ವಾಸವಾಗಿದ್ದಾರೆ. ಸದ್ಯ ಹಸುಗಳಿಗೆ ಮೇವು ಇಲ್ಲದೆ, ಮಕ್ಕಳಿಗೆ ಊಟವಿಲ್ಲದೆ ಜೀವನ ಕಳೆಯುತ್ತಿದ್ದಾರೆ.
ನಮಗೆ ಊಟ, ನೀರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಯಾರಾದರೂ ದನಕರುಗಳಿಗೆ ಮೇವು, ನಮಗೆ ಆಹಾರ ಪದಾರ್ಥಗಳು ನೀಡಿ ಎಂದು ಹೆಳವರ ಕುಟುಂಬಸ್ಥೆ ರತ್ನವ್ವ ತಮ್ಮ ಅಳಲನ್ನು ತೋಡಿಕೊಂಡರು. ಇದಕ್ಕೆ ಸಂಬಂಧಿಸಿದಂತೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಆದಷ್ಟು ಬೇಗನೆ ಬಂದು ಭೇಟಿ ಮಾಡುವುದಾಗಿ ಭರವಸೆ ನೀಡಿದರು.