ಅಥಣಿ: ಪ್ರತೀ ವರ್ಷವೂ ಕೃಷ್ಣಾ ನದಿಯ ಪ್ರವಾಹಕ್ಕೆ ತುತ್ತಾಗುವ ದರೂರ ಗ್ರಾಮವನ್ನು ಸ್ಥಳಾಂತರ ಮಾಡುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುಖಾಂತರ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಗ್ರಾಮಸ್ಥ ದುಂಡಪ್ಪ ಪಡಸಲಗಿ ಮಾತನಾಡಿ, ಕೃಷ್ಣಾ ನದಿ ನೀರಿನ ಪ್ರಮಾಣ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಗ್ರಾಮದ ಜನರಿಗೆ ಗ್ರಾಮ ಪಂಚಾಯತ್ನವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ಹೊರಡಿಸದ ಕಾರಣ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಅಲ್ಲದೇ ಕೊರೊನಾ ಇರುವುದರಿಂದ ಯಾವುದೇ ಸಂಬಂಧಿಕರು ಹಾಗೂ ಬೇರೆ ಗ್ರಾಮದವರು ಸೇರಿಸಿಕೊಳ್ಳಲು ಹಿಂದೆಮುಂದೆ ನೋಡುತ್ತಿದ್ದಾರೆ.
2005ರಿಂದ 2020ರವರೆಗೆ 15 ವರ್ಷಗಳು ಕಳೆದರೂ ಗ್ರಾಮಸ್ಥರಿಗೆ ಇನ್ನೂ ಯಾವುದೇ ರೀತಿಯ ಶಾಶ್ವತ ಪುನರ್ವಸತಿ ಕಲ್ಪಿಸಿಲ್ಲ. ಗ್ರಾಮ ಪಂಚಾಯಯತ್ ಹಾಗೂ ತಹಶೀಲ್ದಾರರು ಗುರುತಿಸಿದ ಸ್ಥಳಕ್ಕೆ ತೆರಳಲು ಗ್ರಾಮಸ್ಥರ ಸಂಪೂರ್ಣ ಒಪ್ಪಿಗೆ ಇದೆ. ಈ ಕಾರಣದಿಂದ ತಕ್ಷಣ ಎರಡು ದಿನಗಳಲ್ಲಿ ಪುನರ್ವಸತಿ ಸ್ಥಳ ಗುರುತಿಸಬೇಕು ಮತ್ತು ಪ್ರತೀ ಕುಟುಂಬಗಳಿಗೊಂದು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಡಬೇಕು.
ಮೇಲ್ಕಾಣಿಸಿದ ವಿಷಯವನ್ನು ನಿರಾಕರಿಸಿದಲ್ಲಿ ಗ್ರಾಮಸ್ಥರು ಸೇರಿ ದರೂರ ಮತ್ತು ಹಲ್ಯಾಳ ನಡುವೆ ಇರುವ ಕೃಷ್ಣಾ ನದಿ ಸೇತುವೆಯ ರಸ್ತೆ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.