ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಪರದಾಡುತ್ತಿರುವ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಸ್ವಂತ ಹಣದಿಂದ ಗ್ರಂಥಾಲಯ ತೆರೆದು ಅಕ್ಷರ ಪ್ರೇಮ ಮೆರೆದಿದ್ದಾರೆ.
ಹೌದು, ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ನಿವಾಸಿಯಾಗಿರುವ ಶಿವಾನಂದ ಹನುಮಂತ ತಿಮ್ಮಾಪುರ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಗ್ರಂಥಾಲಯ ತೆರೆದಿದ್ದಾರೆ. ಸದ್ಯಕ್ಕೆ ಹುಬ್ಬಳ್ಳಿಯ ಸಿಇಎನ್ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿರುವ ಶಿವಾನಂದ, 2020 ರಲ್ಲಿ ಸ್ವಂತ ಹಣದಿಂದ ಕನಸು ಗ್ರಂಥಾಲಯ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರವನ್ನ ಆರಂಭಿಸಿದ್ದಾರೆ.
ಈ ಗ್ರಂಥಾಲಯ ಮಕ್ಕಳ ಪಾಲಿಗೆ ಜ್ಞಾನ ದೇಗುಲವಾಗಿ ಮಾರ್ಪಟ್ಟಿದ್ದು, ಪ್ರತಿನಿತ್ಯ ಹಲವು ವಿದ್ಯಾರ್ಥಿಗಳು ಇಲ್ಲಿಗೆ ಬಂದು ಅಧ್ಯಯನ ಕೈಗೊಳ್ಳುತ್ತಿದ್ದಾರೆ. ಗ್ರಾಮದ ಹೆಣ್ಣು ಮಕ್ಕಳ ಅಧ್ಯಯನಕ್ಕೆ ಅನುಕೂಲ ಕಲ್ಪಿಸಲು ಅವರ ಮನೆಗೆ ಪುಸ್ತಕ ನೀಡಲಾಗುತ್ತಿದೆ. ಪ್ರಸ್ತುತ ಸದಸ್ಯತ್ವದ ಸಂಖ್ಯೆ 300ಕ್ಕೂ ಅಧಿಕ ಇದ್ದು, ಪ್ರತಿ ದಿನ ಇಲ್ಲಿ ಓದಲು ಸುಮಾರು 200 ಜನ ಭೇಟಿ ನೀಡುತ್ತಾರೆ.
ಗ್ರಂಥಾಲಯದಲ್ಲಿ ಸಾವಿರಕ್ಕೂ ಅಧಿಕ ಪುಸ್ತಕಗಳು: ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಒದಗಿಸುವ ನಿಟ್ಟಿನಲ್ಲಿ ಶಿವಾನಂದ ಅವರು ಬಾಡಿಗೆ ಕಟ್ಟಡದಲ್ಲಿ ಅಧ್ಯಯನ ಕೇಂದ್ರ ಆರಂಭಿಸಿದ್ದಾರೆ. ಕಟ್ಟಡದ ಬಾಡಿಗೆ ವೆಚ್ಚ ಭರಿಸುತ್ತಿರುವ ಶಿವಾನಂದ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪೂರಕವಾಗಿರುವ ಪುಸ್ತಕಗಳು, ಶಾಲಾ ಮಕ್ಕಳ ಪುಸ್ತಕ, ಕಥೆಯಾಧಾರಿತ ಪುಸ್ತಕ, ಅಂಬೇಡ್ಕರ್, ಬುದ್ಧ, ಬಸವೇಶ್ವರ, ಭಗವದ್ಗೀತೆ, ರಾಮಾಯಣ, ಮಹಾಭಾರತ ಸೇರಿದಂತೆ ಎಲ್ಲ ಬಗೆಯ 1ಸಾವಿರಕ್ಕೂ ಅಧಿಕ ಪುಸ್ತಕಗಳನ್ನ ಒದಗಿಸಿದ್ದಾರೆ. ಆರಕ್ಷಕನ ಈ ಸೇವೆಯನ್ನು ಮೆಚ್ಚಿ ರಾಜ್ಯದ ವಿವಿದೆಢೆಯಿಂದ ಹಲವು ದಾನಿಗಳು ಕೇಂದ್ರಕ್ಕೆ ಅಗತ್ಯ ಪುಸ್ತಕಗಳನ್ನು ನೀಡುತ್ತಿದ್ದಾರೆ. ಪ್ರಚಲಿತ ವಿದ್ಯಮಾನಗಳ ಅರಿವು ಮಕ್ಕಳಿಗೆ ಇರಲಿ ಎಂಬ ಕಾರಣಕ್ಕೆ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನ ಗ್ರಂಥಾಲಯಕ್ಕೆ ತರಿಸಲಾಗುತ್ತಿದೆ.
ದಿನದ 24 ಗಂಟೆ ಗ್ರಂಥಾಲಯ ತೆರೆದಿರುತ್ತದೆ. ಈ ಕುರಿತಾಗಿ ಗ್ರಂಥಾಲಯದ ಪಕ್ಕದ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಿಸಿ, ಬೆಳಕಿನ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ರಾತ್ರಿ ಬಡ ಮಕ್ಕಳಿಗೆ ಉಚಿತ ತರಗತಿಗಳನ್ನು ಹೇಳಿ ಕೊಡಲಾಗುತ್ತಿದೆ. ನವೋದಯ, ಮೂರಾರ್ಜಿ, ಸೈನಿಕ ವಸತಿ ಶಾಲೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡುವುದಲ್ಲದೇ, ಓದುವ ಎಲ್ಲ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
'2019 ರಿಂದ ಉಂಟಾದ ಕೊರೊನಾ ಬಿಕ್ಕಟ್ಟಿನಿಂದ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡ್ರು. ಬಡವರು ತುತ್ತು ಅನ್ನಕ್ಕೂ ಪರದಾಟ ನಡೆಸಿದ್ರು. ಹೀಗಾಗಿ, ಕೊರೊನಾ ಬಿಕ್ಕಟ್ಟಿನಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಗ್ರಂಥಾಲಯ ನಿರ್ಮಿಸಿ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ನಿತ್ಯವೂ 6 ರಿಂದ 8 ಗಂಟೆಗಳ ಕಾಲ ಅಭ್ಯಾಸ ಮಾಡುವ ಮೂಲಕ ಬ್ಯಾಂಕಿಂಗ್ ಸೇರಿದಂತೆ ವಿವಿಧ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಈ ಗ್ರಂಥಾಲಯದಲ್ಲಿ ಓದಿದ ಸಾಕಷ್ಟು ವಿದ್ಯಾರ್ಥಿಗಳು ಕೆಲಸಕ್ಕೆ ಸೆಲೆಕ್ಟ್ ಆಗಿದ್ದು, ಕೆಲವರಿಗೆ ಆರ್ಡರ್ ಕಾಪಿ ಬಂದಿದೆ' ಎಂಬ ಮಾಹಿತಿಯನ್ನ ಶಿವಾನಂದ ನೀಡಿದರು.
ಇದನ್ನೂ ಓದಿ: ಪ್ರೇಮ ವಿವಾಹ, ಸುಖ ಸಂಸಾರ, ಮುದ್ದಾದ ಮಗು ಜನನ.. ಸಹಿಸದ ಗೃಹಿಣಿ ಅಣ್ಣನಿಂದ ಬಾಮೈದನ ಕೊಲೆ!