ಬೆಳಗಾವಿ: ನಗರದ ಹಿಂಡಲಗಾ ರಸ್ತೆಯ ವನಿತಾ ವಿದ್ಯಾಲಯ ಬಳಿಯ ಡಬಲ್ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಈ ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ವೇಳೆ ಇನ್ನೇನು ಹಿಡಿಯಬೇಕು ಅನ್ನುವಷ್ಟರಲ್ಲಿ, ಚಿರತೆ ಜಸ್ಟ್ ಮಿಸ್ ಆಗಿ ಗಾಲ್ಫ್ ಮೈದಾನದ ಒಳಗೆ ಹೋಗಿದೆ.
ಚಿರತೆ ಪ್ರತ್ಯಕ್ಷವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಹೈ ಅಲರ್ಟ್ ಆಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿರತೆ ಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದರು. ಚಿರತೆ ಇರುವ ಜಾಗವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಸಿಬ್ಬಂದಿ, ಅರವಳಿಕೆ ತಜ್ಞರು ಸಿಡಿಮದ್ದು ಮತ್ತು ಬಲೆಗಳನ್ನು ಹಿಡಿದುಕೊಂಡು ಚಿರತೆ ಸೆರೆಗೆ ಮುಂದಾಗಿದ್ದರು. ಈ ವೇಳೆ ಅರಣ್ಯ ಇಲಾಖೆಯ ದಿಕ್ಕು ತಪ್ಪಿಸಿ ಚಿರತೆ ಕ್ಯಾಂಪ್ ಪ್ರದೇಶದಿಂದ ಮತ್ತೆ ಗಾಲ್ಫ್ ಮೈದಾನದ ಒಳಗೆ ಓಡಿ ಹೋಗಿದೆ.
ಸದ್ಯ ಆಪರೇಷನ್ ಚೀತಾ ಕಾರ್ಯಾಚರಣೆ ಮತ್ತೆ ವಿಫಲವಾಗಿದ್ದು, ರಕ್ಷಣಾ ಇಲಾಖೆಗೆ ಸೇರಿರುವ ಗಾಲ್ಫ್ ಪ್ರದೇಶದಲ್ಲಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಜಂಟಿಯಾಗಿ 100ಕ್ಕೂ ಹೆಚ್ಚು ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಡಿಸಿಪಿ ರವೀಂದ್ರ ಗಡಾದಿ ಸೇರಿದಂತೆ ಹಿರಿಯ ಅಧಿಕಾರಿಗಳು ಆಗಮಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: 22 ಶಾಲೆಗಳಿಗೆ ಜಿಲ್ಲಾಡಳಿತದಿಂದ ರಜೆ ಘೋಷಣೆ
ಜಾಧವ್ ನಗರದಲ್ಲಿ ಕಳೆದ ಆಗಸ್ಟ್ 5 ರಂದು ಚಿರತೆ ಪತ್ತೆಯಾಗಿತ್ತು. ಈ ವೇಳೆ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿ ಬೆಳಗಾವಿ ಗಾಲ್ಫ್ ಮೈದಾನದೊಳಗೆ ಹೋಗಿತ್ತು. ಇದಾದ ಬಳಿಕ ಕಳೆದ 18 ದಿನಗಳಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿವೆ. ಇತ್ತ ಕಳೆದ 18 ದಿನಗಳಿಂದ ಚಿರತೆ ನಗರ ಪ್ರದೇಶದಲ್ಲಿದ್ದರೂ ಚಿರತೆ ಹಿಡಿಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ.