ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ತೀರಿಸುವುದು ಯಾವಾಗಲೂ ಉತ್ತಮ ಅಭ್ಯಾಸವಾಗಿದೆ. ಆದರೆ ಸಾಲ ತೀರಿಸುವುದು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ತಾತ್ಕಾಲಿಕ ಪರಿಣಾಮ ಬೀರಬಹುದು. ನೀವು ನಿಮ್ಮ ಸಾಲವನ್ನು ಸಂಪೂರ್ಣವಾಗಿ ಪಾವತಿಸಿದಾಗ ಅಥವಾ ಬ್ಯಾಲೆನ್ಸ್ ಅನ್ನು ಇತ್ಯರ್ಥಪಡಿಸಿದ ನಂತರ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದಾಗ ನಿಮ್ಮ ಕ್ರೆಡಿಟ್ ಸ್ಕೋರ್ ತಾತ್ಕಾಲಿಕವಾಗಿ ಕುಸಿಯಬಹುದು. ಸಾಲ ತೀರಿಸಿದಾಗಲೂ ಏಕೆ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆಯಾಗುತ್ತದೆ ಎಂಬುದು ಆಶ್ಚರ್ಯದ ವಿಷಯ.
ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಲೆಕ್ಕಹಾಕಲಾಗುತ್ತದೆ, ಸಾಲ ಮರುಪಾವತಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಏಕೆ ಕಡಿಮೆ ಮಾಡಬಹುದು ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ನೀವು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಮೊದಲಿಗೆ ತಿಳಿಯೋಣ.
ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳು: ಸಾಲ ಮರುಪಾವತಿಯ ನಂತರ ನಿಮ್ಮ ಕ್ರೆಡಿಟ್ ಸ್ಕೋರ್ ಏಕೆ ಕುಸಿಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ರೂಪಿಸುವ ಅಂಶಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಕೊಡುಗೆ ನೀಡುವ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
ಪೇಮೆಂಟ್ ಹಿಸ್ಟರಿ: ಇದು ನಿಮ್ಮ ಸ್ಕೋರ್ ಮೇಲೆ ಅತ್ಯಂತ ಗಣನೀಯ ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ಪಾವತಿಸುವುದು ಮತ್ತು ಕನಿಷ್ಠ ಬಾಕಿ ಮೊತ್ತ ಪಾವತಿ ಇದರಲ್ಲಿ ಸೇರಿವೆ.
ಸಾಲದ ಬಳಕೆ: ಇದು ಲಭ್ಯವಿರುವ ಒಟ್ಟು ಸಾಲ ಹಾಗೂ ಬಳಸಿದ ಸಾಲದ ಅನುಪಾತವಾಗಿದೆ.
ಕ್ರೆಡಿಟ್ ಹಿಸ್ಟರಿ ಕಾಲಾವಧಿ: ಇದು ನಿಮ್ಮ ಸಾಲದ ಖಾತೆಗಳ ಸರಾಸರಿ ವಯಸ್ಸನ್ನು ತೋರಿಸುತ್ತದೆ.
ಹೊಸ ಕ್ರೆಡಿಟ್: ನೀವು ಇತ್ತೀಚೆಗೆ ಎಷ್ಟು ಹೊಸ ಕ್ರೆಡಿಟ್ ಖಾತೆಗಳನ್ನು ತೆರೆದಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ.
ಕ್ರೆಡಿಟ್ ಮಿಕ್ಸ್: ನೀವು ಹೊಂದಿರುವ ವಿವಿಧ ರೀತಿಯ ಕ್ರೆಡಿಟ್ ಅನ್ನು ಮೌಲ್ಯಮಾಪನ ಮಾಡುವುದು.
ಸಾಲ ಮರುಪಾವತಿ ನಿಮ್ಮ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ? : ನಿಮ್ಮ ಬಾಕಿ ಸಾಲವನ್ನು ಕಡಿಮೆ ಮಾಡಿಕೊಳ್ಳುವುದು ಯಾವಾಗಲೂ ಉತ್ತಮ. ಆದರೆ ಹೀಗೆ ಮಾಡಿದಾಗ ಕೆಲ ಕಾರಣಗಳಿಂದ ನಿಮ್ಮ ಕ್ರೆಡಿಟ್ ಸ್ಕೋರ್ ತಾತ್ಕಾಲಿಕವಾಗಿ ಕಡಿಮೆಯಾಗಬಹುದು.
ಕ್ರೆಡಿಟ್ ಬಳಕೆಯ ಅನುಪಾತ ಹೆಚ್ಚಾಗುವುದು: ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡಿದಾಗ ಅಥವಾ ಬ್ಯಾಲೆನ್ಸ್ ಪಾವತಿ ಮಾಡಿದಾಗ ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತ ಹೆಚ್ಛಾಗಬಹುದು. ಇದು ನಿಮ್ಮ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಕಡಿಮೆ ಸರಾಸರಿ ಕ್ರೆಡಿಟ್ ಖಾತೆ ವಯಸ್ಸು: ಹಳೆಯ ಖಾತೆಗಳನ್ನು ಮುಚ್ಚುವುದರಿಂದ ನಿಮ್ಮ ಕ್ರೆಡಿಟ್ ಇತಿಹಾಸದ ಸರಾಸರಿ ವಯಸ್ಸು ಕಡಿಮೆಯಾಗುತ್ತದೆ. ಇದು ನಿಮ್ಮ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಕ್ರೆಡಿಟ್ ಖಾತೆಗಳ ಕಡಿಮೆ ವಿಧಗಳು: ಖಾತೆಯನ್ನು ಮುಚ್ಚುವುದರಿಂದ ನೀವು ಹೊಂದಿರುವ ವಿವಿಧ ಕ್ರೆಡಿಟ್ ಪ್ರಕಾರಗಳನ್ನು ಮಿತಿಗೊಳಿಸಬಹುದು. ಇದು ನಿಮ್ಮ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ.
ಕ್ರೆಡಿಟ್ ರಿಪೋರ್ಟಿಂಗ್ ಲ್ಯಾಗ್: ಕ್ರೆಡಿಟ್ ಬ್ಯೂರೋಗಳು ಪ್ರತಿ 30 ರಿಂದ 45 ದಿನಗಳಿಗೊಮ್ಮೆ ವರದಿಗಳನ್ನು ನವೀಕರಿಸುತ್ತವೆ. ಹೀಗಾಗಿ ಇತ್ತೀಚಿನ ಸಾಲ ಮರುಪಾವತಿ ತಕ್ಷಣಕ್ಕೆ ಬಿಂಬಿತವಾಗದಿರಬಹುದು.
ಇತರ ಕ್ರೆಡಿಟ್ ಸಮಸ್ಯೆಗಳು: ವಿಳಂಬ ಪಾವತಿ ಅಥವಾ ಸಾಲದ ಬಗ್ಗೆ ಪದೇ ಪದೆ ವಿಚಾರಣೆ ಮಾಡುವಂಥ ಸಾಲ ಮರುಪಾವತಿಗೆ ಸಂಬಂಧವಿಲ್ಲದ ಅಂಶಗಳು ನಿಮ್ಮ ಸ್ಕೋರ್ ಮೇಲೆ ಪ್ರಭಾವ ಬೀರಬಹುದು.
ಕ್ರೆಡಿಟ್ ಸ್ಕೋರ್ ಮೇಲಿನ ಪರಿಣಾಮ ಕಡಿಮೆ ಮಾಡಲು ಈ ಕ್ರಮ ಅನುಸರಿಸಿ:
ಕ್ರೆಡಿಟ್ ಬಳಕೆಯನ್ನು ನಿರ್ವಹಿಸಿ: ಆರೋಗ್ಯಕರ ಕ್ರೆಡಿಟ್ ಬಳಕೆಯ ಅನುಪಾತವನ್ನು ಕಾಪಾಡಿಕೊಳ್ಳಲು ಬಾಕಿಗಳನ್ನು ಪಾವತಿಸಿ.
ಹಳೆಯ ಖಾತೆಗಳನ್ನು ನಿರ್ವಹಿಸಿ: ನಿಮ್ಮ ಸರಾಸರಿ ಕ್ರೆಡಿಟ್ ಖಾತೆಯ ವಯಸ್ಸನ್ನು ಕಾಪಾಡಿಕೊಳ್ಳಲು ಹಳೆಯ ಖಾತೆಗಳನ್ನು ಹಾಗೆ ತೆರೆದಿಡಿ.
ಕ್ರೆಡಿಟ್ ಪ್ರಕಾರಗಳನ್ನು ವೈವಿಧ್ಯಗೊಳಿಸಿ: ಕ್ರೆಡಿಟ್ ಪ್ರಕಾರಗಳ ಮಿಶ್ರಣವನ್ನು ಹೊಂದಿರುವುದು ನಿಮ್ಮ ಸ್ಕೋರ್ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರುತ್ತದೆ. ಆದ್ದರಿಂದ ವಿಭಿನ್ನ ಸಾಲದ ಖಾತೆಗಳನ್ನು ಒಮ್ಮೆಲೇ ಮುಚ್ಚಬೇಡಿ.
ನಿಮ್ಮ ಕ್ರೆಡಿಟ್ ವರದಿಯನ್ನು ಆಗಾಗ ಪರಿಶೀಲಿಸಿ: ಸಾಲ ಮರುಪಾವತಿಗೆ ಸಂಬಂಧವಿಲ್ಲದ ದೋಷಗಳು ಅಥವಾ ಸಮಸ್ಯೆಗಳನ್ನು ನಿಯಮಿತವಾಗಿ ಪರಿಶೀಲಿಸಿ.
ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸುವುದು ಹೇಗೆ?: ಸಾಲದ ಮರುಪಾವತಿಯಿಂದಾಗಿ ಕ್ರೆಡಿಟ್ ಸ್ಕೋರ್ ಕುಸಿತವಾಗುವುದು ಸಾಮಾನ್ಯವಾಗಿ ತಾತ್ಕಾಲಿಕವಾಗಿರುತ್ತದೆ. ನಿಮ್ಮ ಸ್ಕೋರ್ ಮತ್ತೆ ಪುಟಿದೇಳಲು ಕೆಲವು ತಿಂಗಳುಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ಅವಧಿಯಲ್ಲಿ, ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸಿ ಮತ್ತು ಅದನ್ನು ಉತ್ತಮ ಪಡಿಸಲು ಸರಿಯಾದ ಸಮಯಕ್ಕೆ ಬಾಕಿ ಪಾವತಿ ಮಾಡುವುದನ್ನು ಮುಂದುವರಿಸಿ.
ಇದನ್ನೂ ಓದಿ : ಭಾರತದ ಆರ್ಥಿಕತೆಗೆ ಖುಷಿ ಸುದ್ದಿ; ಇಳಿಕೆಯತ್ತ ಕಚ್ಚಾ ತೈಲ ಬೆಲೆ