ಮುಂಬೈ: ಭಾರತದ ಷೇರು ಮಾರುಕಟ್ಟೆಗಳು ಗುರುವಾರ ಏರಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿವೆ. ನಿಫ್ಟಿ-50 ಹಿಂದಿನ ಮುಕ್ತಾಯದ 21,654.75ಕ್ಕೆ ಹೋಲಿಸಿದರೆ ಗುರುವಾರ 21,715ರಲ್ಲಿ ಪ್ರಾರಂಭವಾಯಿತು. ದಿನದ ಮಧ್ಯದಲ್ಲಿ ನಿಫ್ಟಿ ತನ್ನ ಸಾರ್ವಕಾಲಿಕ ಗರಿಷ್ಠ 21,801.45ಕ್ಕೆ ತಲುಪಿತ್ತು. ಸೂಚ್ಯಂಕವು ಅಂತಿಮವಾಗಿ 124 ಪಾಯಿಂಟ್ ಅಥವಾ ಶೇಕಡಾ 0.57ರಷ್ಟು ಏರಿಕೆ ಕಂಡು 21,778.70ರಲ್ಲಿ ಕೊನೆಗೊಂಡಿತು.
ಬುಧವಾರದ ಮುಕ್ತಾಯವಾದ 72,038.43ಕ್ಕೆ ಹೋಲಿಸಿದರೆ ಸೆನ್ಸೆಕ್ಸ್ 72,262.67ರಲ್ಲಿ ಪ್ರಾರಂಭವಾಯಿತು ಮತ್ತು ದಿನದಲ್ಲಿ ತನ್ನ ಹೊಸ ದಾಖಲೆಯ ಗರಿಷ್ಠ 72,484.34ಕ್ಕೆ ತಲುಪಿತ್ತು. ಕೊನೆಗೆ ಸೆನ್ಸೆಕ್ಸ್ 372 ಪಾಯಿಂಟ್ ಅಥವಾ ಶೇಕಡಾ 0.52ರಷ್ಟು ಏರಿಕೆಯೊಂದಿಗೆ 72,410.38ರಲ್ಲಿ ಕೊನೆಗೊಂಡಿತು.
ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ದಿನದಲ್ಲಿ ತನ್ನ ಹೊಸ ದಾಖಲೆಯ ಗರಿಷ್ಠ 36,556.64ಕ್ಕೆ ತಲುಪಿ, ಅಂತಿಮವಾಗಿ ಶೇಕಡಾ 0.66ರಷ್ಟು ಏರಿಕೆಯಾಗಿ 36,528.19ರಲ್ಲಿ ಕೊನೆಗೊಂಡಿತು. ಬಿಎಸ್ಇ ಸ್ಮಾಲ್ಕ್ಯಾಪ್ ಸೂಚ್ಯಂಕ ಶೇಕಡಾ 0.23ರಷ್ಟು ಏರಿಕೆ ಕಂಡು 42,382.30ಕ್ಕೆ ತಲುಪಿದೆ.
ಲಾರ್ಸನ್ ಆಂಡ್ ಟೂಬ್ರೊ, ಮಹೀಂದ್ರಾ ಅಂಡ್ ಮಹೀಂದ್ರಾ, ಟಾಟಾ ಮೋಟಾರ್ಸ್, ಟೈಟಾನ್, ವಿಪ್ರೋ, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್, ಎನ್ಟಿಪಿಸಿ, ಜೆಎಸ್ಡಬ್ಲ್ಯೂ, ನೆಸ್ಲೆ ಮತ್ತು ಇಂಡಸ್ಇಂಡ್ ಬ್ಯಾಂಕ್ ಸೇರಿದಂತೆ ಸುಮಾರು 360 ಷೇರುಗಳು 52 ವಾರಗಳ ಗರಿಷ್ಠ ಮಟ್ಟ ತಲುಪಿದವು.
ಬಿಎಸ್ಇಯಲ್ಲಿ ಲಿಸ್ಟ್ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ದಿನದಲ್ಲಿ ಇದ್ದ ಸುಮಾರು 361.3 ಲಕ್ಷ ಕೋಟಿ ರೂ.ಗಳಿಂದ ಸುಮಾರು 363 ಲಕ್ಷ ಕೋಟಿ ರೂ.ಗೆ ಏರಿದೆ. ಅಂದರೆ ಹೂಡಿಕೆದಾರರು ಒಂದೇ ದಿನದ ವಹಿವಾಟಿನಲ್ಲಿ ಸುಮಾರು 1.7 ಲಕ್ಷ ಕೋಟಿ ರೂ.ಗಳಷ್ಟು ಶ್ರೀಮಂತರಾಗಿದ್ದಾರೆ.
ನಿಫ್ಟಿ 50 ಸೂಚ್ಯಂಕದಲ್ಲಿ ಲಾಭ ಗಳಿಸಿದ ಷೇರುಗಳು: ಕೋಲ್ ಇಂಡಿಯಾ (ಶೇ 4.21), ಎನ್ ಟಿಪಿಸಿ (ಶೇ 3.07) ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ (ಶೇ 2.79) ಷೇರುಗಳು ಏರಿಕೆ ಕಂಡಿವೆ.
ನಿಫ್ಟಿ 50 ಸೂಚ್ಯಂಕದಲ್ಲಿ ನಷ್ಟ ಅನುಭವಿಸಿದ ಷೇರುಗಳು : ನಿಫ್ಟಿ-50ಯ ಅದಾನಿ ಎಂಟರ್ಪ್ರೈಸಸ್ (ಶೇಕಡಾ 0.93ರಷ್ಟು ಕುಸಿತ), ಲಾರ್ಸನ್ & ಟೂಬ್ರೊ (ಶೇಕಡಾ 0.59ರಷ್ಟು ಕುಸಿತ) ಮತ್ತು ಐಷರ್ ಮೋಟಾರ್ಸ್ (ಶೇಕಡಾ 0.59ರಷ್ಟು ಕುಸಿತ) ಇವು ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.
ವಲಯ ಸೂಚ್ಯಂಕಗಳು: ನಿಫ್ಟಿ ಐಟಿ (ಶೇ 0.14) ಮತ್ತು ಗ್ರಾಹಕ ಬೆಲೆಬಾಳುವ ವಸ್ತುಗಳು (ಶೇ 0.03ರಷ್ಟು ಕುಸಿತ) ಹೊರತುಪಡಿಸಿ, ನಿಫ್ಟಿ ತೈಲ ಮತ್ತು ಅನಿಲ ಶೇ 2.01, ಎಫ್ ಎಂಸಿಜಿ ಶೇ 1.35, ಹೆಲ್ತ್ ಕೇರ್ ಶೇ 1.24, ಫಾರ್ಮಾ ಶೇ 1.23, ಪಿಎಸ್ ಯು ಬ್ಯಾಂಕ್ ಶೇ 1.03, ಆಟೋ ಶೇ 1.03ರಷ್ಟು ಏರಿಕೆ ಕಂಡಿವೆ. ನಿಫ್ಟಿ ಬ್ಯಾಂಕ್ ಶೇಕಡಾ 0.47 ರಷ್ಟು ಏರಿಕೆ ಕಂಡು 48,508.55 ಕ್ಕೆ ತಲುಪಿದೆ.
ಇದನ್ನೂ ಓದಿ: ತೊಗರಿ, ಉದ್ದಿನ ಬೇಳೆ ಆಮದು ಸುಂಕ ವಿನಾಯಿತಿ ಮುಂದಿನ ಮಾರ್ಚ್ವರೆಗೆ ವಿಸ್ತರಣೆ