ನವದೆಹಲಿ : ಭಾರತೀಯ ಷೇರು ಸೂಚ್ಯಂಕಗಳು ಹಿಂದಿನ ವಹಿವಾಟು ಅವಧಿಯಲ್ಲಿ ಇಳಿಕೆಯೊಂದಿಗೆ ಮುಕ್ತಾಯಗೊಂಡಿದ್ದವು. ಆದರೆ ಸೋಮವಾರದ ಆರಂಭಿಕ ಅವಧಿಯಲ್ಲಿ ಕೊಂಚ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದವು. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇಕಡಾ 0.2 ರಿಂದ 0.3 ರಷ್ಟು ಹೆಚ್ಚಾಗಿವೆ. ಪ್ರಸ್ತುತ ಸೆನ್ಸೆಕ್ಸ್ 8.70 ಪಾಯಿಂಟ್ ಅಥವಾ ಶೇ 0.01ರಷ್ಟು ಏರಿಕೆಯಾಗಿ 62,988.07 ಕ್ಕೆ ತಲುಪಿದೆ ಮತ್ತು ನಿಫ್ಟಿ 17.80 ಪಾಯಿಂಟ್ ಅಥವಾ ಶೇ 0.10 ರಷ್ಟು ಏರಿಕೆಯಾಗಿ 18,683.30 ಕ್ಕೆ ತಲುಪಿದೆ. ಸುಮಾರು 1714 ಷೇರುಗಳು ಏರಿಕೆಯಲ್ಲಿವೆ ಮತ್ತು 1480 ಷೇರುಗಳು ಇಳಿಕೆಯಲ್ಲಿದ್ದವು. 144 ಷೇರುಗಳ ಬೆಲೆಗಳು ಸ್ಥಿರವಾಗಿವೆ.
ಜಾಗತಿಕ ಷೇರು ಮಾರುಕಟ್ಟೆ ರ‍್ಯಾಲಿಯು ತನ್ನ ವೇಗವನ್ನು ಕಳೆದುಕೊಳ್ಳುತ್ತಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಹೇಳಿದರು. ಕಳೆದ ವಾರ S&P 500 ತನ್ನ 5 ವಾರಗಳ ಏರಿಕೆಯ ಓಟವನ್ನು ನಿಲ್ಲಿಸಿತ್ತು. ಮತ್ತು ಕಳೆದ ವಾರ ಭಾರತದಲ್ಲಿ ಮಿಡ್ ಮತ್ತು ಸ್ಮಾಲ್-ಕ್ಯಾಪ್ ಸೂಚ್ಯಂಕಗಳು ತಮ್ಮ 12 ವಾರಗಳ ಏರಿಕೆಯ ಸರಣಿಯ ಕೊಂಡಿ ಕಳಚಿಕೊಂಡಿದ್ದವು. ಷೇರು ಮಾರುಕಟ್ಟೆಯಲ್ಲಿ ಇದೇ ಪ್ರವೃತ್ತಿ ಮುಂದುವರಿಯಲಿದೆಯಾ ಅಥವಾ ಇಲ್ಲವಾ ಎಂಬುದನ್ನು ಮುಂದಿನ ಎರಡು ದಿನಗಳ ವಹಿವಾಟು ನಿರ್ಧರಿಸಲಿದೆ ಎಂದು ವಿಜಯಕುಮಾರ್ ಇದೇ ವೇಳೆ ತಿಳಿಸಿದರು.
ಹಣಕಾಸು ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಗಳ ನಿರೀಕ್ಷೆ ಇದ್ದು, ಅದಕ್ಕಾಗಿ ಕಾಯಿರಿ ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್ನ ಟೆಕ್ನಿಕಲ್ ರಿಸರ್ಚ್ ಎಸ್ವಿಪಿ ಅಜಿತ್ ಮಿಶ್ರಾ ಹೂಡಿಕೆದಾರರಿಗೆ ಸಲಹೆ ನೀಡಿದ್ದಾರೆ. ದುರ್ಬಲ ಜಾಗತಿಕ ಟ್ರೆಂಡ್ಗಳು ಹೆಚ್ಚಾಗಿ ಭಾವನೆಗಳ ಜೊತೆ ಆಟವಾಡುತ್ತಿವೆ ಮತ್ತು ಭಾರತ ಸೇರಿದಂತೆ ಮಾರುಕಟ್ಟೆಗಳಾದ್ಯಂತ ಲಾಭ ತೆಗೆದುಕೊಳ್ಳುವಿಕೆಯನ್ನು ಪ್ರೇರೇಪಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಕರೆನ್ಸಿಗಳು: ಸೋಮವಾರದಂದು ತನ್ನ ಪ್ರಮುಖ ಸ್ಪರ್ಧಿಗಳ ಎದುರು ಡಾಲರ್ ಒಂದು ವಾರದ ಗರಿಷ್ಠ ಮಟ್ಟದಲ್ಲಿದೆ. ಕರೆನ್ಸಿ ಬಾಸ್ಕೆಟ್ ವಿಷಯದಲ್ಲಿ ಅಮೆರಿಕದ ಡಾಲರ್ 82 ರಲ್ಲಿ ಸ್ಥಿರವಾಗಿದೆ. ಯೂರೋ ಕೊನೆಯದಾಗಿ ಶೇ 0.07 ರಷ್ಟು ಏರಿಕೆಯಾಗಿ $1.0902 ನಲ್ಲಿತ್ತು. ಹಾಗೆಯೇ ಸ್ಟರ್ಲಿಂಗ್ 0.1 ರಷ್ಟು ಏರಿಕೆಯಾಗಿ $1.27285 ಗೆ ತಲುಪಿದೆ. ಜಪಾನಿನ ಯೆನ್ ಪ್ರತಿ ಡಾಲರ್‌ಗೆ ಶೇ 0.3 ರಷ್ಟು ಏರಿಕೆಯಾಗಿ 143.27 ಗೆ ತಲುಪಿದೆ.
ಇಂಧನ ಮಾರುಕಟ್ಟೆ: ವಾರಾಂತ್ಯದಲ್ಲಿ ರಷ್ಯಾದ ಖಾಸಗಿ ಪಡೆಗಳ ಸೈನಿಕರು ನಡೆಸಿದ ವಿಫಲ ದಂಗೆಯ ನಂತರ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ರಷ್ಯಾದಿಂದ ತೈಲ ಪೂರೈಕೆಯ ಮೇಲೆ ಸಂಭವನೀಯ ಪರಿಣಾಮದ ಬಗ್ಗೆ ಕಳವಳ ಮೂಡಿದೆ. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್‌ಗೆ ಶೇ 0.69ಕ್ಕೆ ಏರಿಕೆಯಾಗಿ $74.36 ಕ್ಕೆ ತಲುಪಿದೆ. US ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು ಬ್ಯಾರೆಲ್‌ಗೆ ಶೇ 0.71ಕ್ಕೆ ಹೆಚ್ಚಳವಾಗಿ $69.65 ನಲ್ಲಿದೆ.
ಇದನ್ನೂ ಓದಿ : Ukraine Russia war: 200 ರಷ್ಯಾ ಸೈನಿಕರ ಸಾವು: ಉಕ್ರೇನ್ ಮಿಲಿಟರಿ ಪ್ರತಿಪಾದನೆ