ಮುಂಬೈ: ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಗುರುವಾರ ಬಲವಾದ ಚೇತರಿಕೆ ಕಂಡಿದ್ದು, ಲಾಭದೊಂದಿಗೆ ವಹಿವಾಟನ್ನು ಕೊನೆಗೊಳಿಸಿವೆ. ಬಿಎಸ್ಇ ಸೆನ್ಸೆಕ್ಸ್ 385.04 ಪಾಯಿಂಟ್ಸ್ ಏರಿಕೆಗೊಂಡು 66,265.56 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 50 116 ಪಾಯಿಂಟ್ಸ್ ಏರಿಕೆಗೊಂಡು 19,727.05 ಪಾಯಿಂಟ್ಸ್ ತಲುಪಿದೆ. ನಿಫ್ಟಿ ಮಿಡ್ ಕ್ಯಾಪ್ ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ ಷೇರುಗಳು ಏರಿಕೆಯಾಗಿದ್ದರಿಂದ ವಿಶಾಲ ಮಾರುಕಟ್ಟೆಗಳು ಹಿಂದಿನ ದಿನದ ವಹಿವಾಟಿನಲ್ಲಿ ಕಳೆದುಕೊಂಡಿದ್ದ ಆವೇಗವನ್ನು ಮರಳಿ ಪಡೆದುಕೊಂಡವು.
ವಲಯ ಸೂಚ್ಯಂಕಗಳು ಕೂಡ ಬಲವಾದ ಚೇತರಿಕೆಗೆ ಸಾಕ್ಷಿಯಾದವು. ದೊಡ್ಡ ಮಟ್ಟದ ವಲಯ ಸೂಚ್ಯಂಕಗಳಾದ ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ತಲಾ ಶೇಕಡಾ 1 ಕ್ಕಿಂತ ಹೆಚ್ಚಾಗಿವೆ. ನಿಫ್ಟಿ ರಿಯಾಲ್ಟಿ ಮತ್ತು ನಿಫ್ಟಿ ಮೀಡಿಯಾ ಕೂಡ ಶೇಕಡಾ 1 ಕ್ಕಿಂತ ಹೆಚ್ಚು ಲಾಭ ಗಳಿಸಿದರೆ, ಎಫ್ಎಂಸಿಜಿ ಮತ್ತು ಫಾರ್ಮಾ ಸೂಚ್ಯಂಕಗಳು ಕುಸಿದವು. ಕೋಲ್ ಇಂಡಿಯಾ, ಎಲ್ ಅಂಡ್ ಟಿ, ಇಂಡಸ್ ಇಂಡ್ ಬ್ಯಾಂಕ್, ಎಸ್ ಬಿಐ ಲೈಫ್ ಮತ್ತು ಟೆಕ್ ಮಹೀಂದ್ರಾ ನಿಫ್ಟಿ-50 ಯಲ್ಲಿ ಲಾಭ ಗಳಿಸಿದ ಟಾಪ್ 5 ಷೇರುಗಳಾಗಿವೆ. ಮತ್ತೊಂದೆಡೆ, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಒಎನ್ಜಿಸಿ, ಬ್ರಿಟಾನಿಯಾ, ಎಂ &ಎಂ ಮತ್ತು ಸನ್ ಫಾರ್ಮಾ ಕುಸಿತ ಕಂಡ ಪ್ರಮುಖ ಷೇರುಗಳಾಗಿವೆ.
ಕೋಲ್ ಇಂಡಿಯಾ ನಿಫ್ಟಿ-50 ಯಲ್ಲಿ ಲಾಭ ಗಳಿಸಿದ ಅಗ್ರ ಷೇರು ಆಗಿದ್ದು, ಒಂದು ತಿಂಗಳ ಕಾಲ ತನ್ನ ಬಲವಾದ ಓಟವನ್ನು ಮುಂದುವರಿಸಿದೆ. ಪಿಎಸ್ಯು ಷೇರುಗಳು ಇಂದು 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿವೆ ಮತ್ತು 5 ವಹಿವಾಟು ಅವಧಿಗಳಲ್ಲಿ ಶೇಕಡಾ 17 ಕ್ಕಿಂತ ಹೆಚ್ಚಾಗಿವೆ. ತಜ್ಞರ ಪ್ರಕಾರ, ಹೆಚ್ಚಿನ ಬೇಡಿಕೆಯ ನಿರೀಕ್ಷೆಗಳು ಷೇರು ಬೆಲೆಗಳನ್ನು ಹೆಚ್ಚಿಸುತ್ತಿವೆ.
ಏತನ್ಮಧ್ಯೆ, ಲಾರ್ಸೆನ್ & ಟೂಬ್ರೊ ಷೇರುಗಳು ಇಂಟ್ರಾಡೇ ವಹಿವಾಟಿನಲ್ಲಿ ದಾಖಲೆಯ ಗರಿಷ್ಠ 2,855.95 ರೂ.ಗೆ ತಲುಪಿದವು ಮತ್ತು ಶೇಕಡಾ 4.24 ರಷ್ಟು ಏರಿಕೆಯಾಗಿ 2,846.10 ರೂ.ಗೆ ಸ್ಥಿರವಾದವು. ಸೌದಿ ಅರಾಮ್ಕೊದಿಂದ 2.9 ಬಿಲಿಯನ್ ಡಾಲರ್ ಮೌಲ್ಯದ ಆರ್ಡರ್ ಪಡೆಯುವ ಸಾಧ್ಯತೆಯ ವರದಿಗಳಿಂದ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ. ಕೊಚ್ಚಿನ್ ಶಿಪ್ ಯಾರ್ಡ್ ಷೇರುಗಳು ಸಹ ತೀವ್ರವಾಗಿ ಏರಿಕೆಯಾಗಿದ್ದು, ಶೇಕಡಾ 20 ರಷ್ಟು ಗಳಿಕೆ ಕಂಡು ಸಾರ್ವಕಾಲಿಕ ಗರಿಷ್ಠ 1,146.15 ರೂ.ಗೆ ತಲುಪಿದೆ.
ಸೌದಿ ಅರೇಬಿಯಾ ಮತ್ತು ರಷ್ಯಾಗಳು ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಕಚ್ಚಾತೈಲ ಬೆಲೆಗಳು ಇಂದೂ ಏರಿಕೆಯಾಗಲಿವೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಚೀನಾದ ಅನಿಶ್ಚಿತ ಆರ್ಥಿಕ ದೃಷ್ಟಿಕೋನದ ಕಾರಣದಿಂದ ಜಾಗತಿಕ ತೈಲ ಬೆಲೆಗಳು ಗುರುವಾರ ಇಳಿಕೆಯಾದವು. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್ಗೆ 42 ಸೆಂಟ್ಸ್ ಅಥವಾ 0.5% ಕುಸಿದು 90.18 ಡಾಲರ್ಗೆ ತಲುಪಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ಕ್ರೂಡ್ (ಡಬ್ಲ್ಯುಟಿಐ) ಫ್ಯೂಚರ್ಸ್ 52 ಸೆಂಟ್ಸ್ ಅಥವಾ 0.6% ಕುಸಿದು 87.02 ಡಾಲರ್ಗೆ ತಲುಪಿದೆ.
ಇದನ್ನೂ ಓದಿ : 90 ಡಾಲರ್ ದಾಟಿದ ಕಚ್ಚಾತೈಲ ಬೆಲೆ; ಸೌದಿ ಅರೇಬಿಯಾದಿಂದ ಉತ್ಪಾದನೆ ಕಡಿತದ ಎಫೆಕ್ಟ್