ಇಂದಿನಿಂದ ಹೊಸ ತಿಂಗಳು ಆರಂಭ ಆಗಿದೆ. ಅದರ ಜೊತೆಗೆ ಹೊಸ ನಿಯಮಗಳು ಕೂಡ ಬದಲಾವಣೆ ಆಗಿದೆ. ಇದು ನೇರವಾಗಿ ಸಾರ್ವಜನಿಕರ ಜೇಬಿನ ಮೇಲೆ ಹೊರೆ ಹೆಚ್ಚಿಸುತ್ತಿದೆ. ಎಲ್‌ಪಿಜಿ ಸಿಲಿಂಡರ್ ದರದಿಂದ ಹಾಲಿನ ದರ ಏರಿಕೆ ಸೇರಿದಂತ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಐಟಿಆರ್ ದಂಡದ ಭರ್ತಿವರೆಗೆ ಎಲ್ಲ ನಿಯಮಗಳು ಬದಲಾಗಿದ್ದು, ಇದು ವಾಣಿಜ್ಯಾತ್ಮಕ ಚಟುವಟಿಕೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಹಾಗಾದರೆ ಆಗಸ್ಟ್ 1ರಿಂದ ಬದಲಾಗುತ್ತಿರುವ ನಿಯಮಗಳು ಯಾವುದು ಎಂಬ ಮಾಹಿತಿ ಇಲ್ಲಿದೆ.
ಎಲ್‌ಪಿಜಿ ಅಗ್ಗ: ಪ್ರತಿತಿಂಗಳ ಆರಂಭದಲ್ಲಿ ದೇಶಕ್ಕೆ ಎಲ್‌ಪಿಜಿ ಗ್ಯಾಸ್ ವಿತರಣೆ ಮಾಡುವ ಕಂಪನಿಗಳು ಅದರ ಬೆಲೆ ನಿರ್ಧರಿಸುತ್ತದೆ. ಪ್ರತಿ ಬಾರಿ ಗ್ಯಾಸ್ ದರ ಹೆಚ್ಚಳ ಎಂಬ ಸುದ್ದಿ ಕೇಳುವ ಜನರಿಗೆ ಈ ಬಾರಿ ರಿಲೀಫ್ ನೀಡಿರುವ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ ಕಡಿಮೆ ಮಾಡಿ ಸಿಹಿ ಸುದ್ದಿ ನೀಡಿದೆ. ಇನ್ನು ಮನೆ ಬಳಕೆಯ ಸಿಲಿಂಡರ್ನ ದರದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ವಾಣಿಜ್ಯ ಸಿಲಿಯಂಡರ್ ಬೆಲೆ ಇದೀಗ 1780ರಿಂದ 1680ರ ಆಗಲಿದೆ. ಕಳೆದ ತಿಂಗಳು ಜುಲೈ 4ರಂದು ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 7ರೂ ಹೆಚ್ಚಿಸಿದ್ದವು.
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮ: ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ನೀಡುತ್ತಿದ್ದ ಕ್ಯಾಶ್ ಬ್ಯಾಕ್ ಮತ್ತು ಇನ್ಸೆಟಿವ್ ಪಾಯಿಂಟ್ಗಳನ್ನು ಕಡಿಮೆ ಮಾಡಿದೆ. ಅಂದರೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಫ್ಲಿಪ್ಕಾರ್ಟ್ನಲ್ಲಿ ಶಾಪಿಂಗ್ ಮಾಡಿದರೆ ಇನ್ಮುಂದೆ ಕ್ಯಾಶ್ಬ್ಯಾಕ್ ಪಡೆಯಲು ಸಾಧ್ಯವಾಗುವುದಿಲ್ಲ. ಈ ಹೊಸ ನಿಯಮ ಆಗಸ್ಟ್ 12ರಿಂದ ಜಾರಿಯಾಗಲಿದೆ.
ಐಟಿಆರ್ ಸಲ್ಲಿಕೆ: ಇನ್ನು 2022-23ರ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಲು ಜುಲೈ 31 ಕಡೆಯ ದಿನವಾಗಿದೆ. ಇಂದಿನಿಂದ ನೀವು ಐಟಿಆರ್ ಭರ್ತಿ ಮಾಡುವುದಾದರೆ, ದಂಡ ಸಹಿತ ಮಾಡಬೇಕಿದೆ. ಈ ದಂಡದ ಮೊತ್ತ 1000 ದಿಂದ 5000 ರೂ ಇರಲಿದೆ.
ಬ್ಯಾಂಕ್ಗಳಿಗೆ ಹೆಚ್ಚಿನ ರಜೆ: ಆಗಸ್ಟ್ ಮಾಸ ಬ್ಯಾಂಕ್ ಉದ್ಯೋಗಿಗಳಿಗೆ ಬಂಪರ್ ಮಾಸವೂ ಹೌದು. ಈ ತಿಂಗಳಲ್ಲಿ ಶನಿವಾರ ಮತ್ತು ಭಾನುವಾರ ಸೇರಿದಂತೆ ಒಟ್ಟಾರೆ 14 ದಿನಗಳು ರಜೆ ಇದ್ದು, ಇದರಿಂದ ಗ್ರಾಹಕರು ತೊಂದರೆ ಪಡುವಂತೆ ಆಗುತ್ತದೆ. ಈ ಹಿನ್ನೆಲೆ ಬ್ಯಾಂಕ್ ಸಂಬಂಧಿ ಪ್ರಮುಖ ಕೆಲಸಗಳಿದ್ದರೆ, ಈಗಲೇ ಮುಗಿಸಿಕೊಳ್ಳಿ
ಎಸ್ಬಿಐ ಅಮೃತ್ ಕಳಶ ಯೋಜನೆಗೆ ಡೆಡ್ಲೈನ್: ಬ್ಯಾಂಕ್ನಲ್ಲಿ ಹೂಡಿಕೆ ಮಾಡಬೇಕು ಎಂದರೆ ನಿಮಗೆ ಈ ಯೋಜನೆ ಉತ್ತಮವಾಗಿದೆ. ಅಲ್ಲದೇ, ಈ ಯೋಜನೆ ಭರ್ತಿಗೆ ಅಂತಿಮ ದಿನ ಆಗಸ್ಟ್ 15 ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ಕಳಶ ಯೋಜನೆಯಲ್ಲಿ ಹೂಡಿಕೆಯಲ್ಲಿ 7.1ರಷ್ಟು ಬಡ್ಡಿ ದರ ಸಿಗಲಿದೆ. 400 ದಿನಗಳ ಎಫ್ಡಿ ಇದಾಗಿದೆ. ಈ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ 7.6ರಷ್ಟು ಬಡ್ಡಿ ಸಿಗಲಿದೆ.
ಇದನ್ನೂ ಓದಿ: ವಾಣಿಜ್ಯ ಸಿಲಿಂಡರ್ ದರ 99.75 ರೂಪಾಯಿ ಇಳಿಕೆ: ಈಗ ಮಾರುಕಟ್ಟೆಯಲ್ಲಿ ಎಷ್ಟಿದೆ ಗೊತ್ತಾ ಎಲ್‌ಪಿಜಿ ಬೆಲೆ?