ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತನ್ನ ಮುಂಬರುವ ಜೂನ್ 8 ರ ಪ್ರಕಟಣೆಯ ಸಮಯದಲ್ಲಿ ಪಾಲಿಸಿ ರೆಪೊ ದರವನ್ನು (ಮಾನದಂಡದ ಬಡ್ಡಿದರ) ಶೇಕಡಾ 6.5 ರಲ್ಲಿಯೇ ಮುಂದುವರಿಸುವ ಸಾಧ್ಯತೆಯಿದೆ ಆರ್ಥಿಕ ತಜ್ಞರು ಹೇಳಿದ್ದಾರೆ. ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿರುವುದು ಮತ್ತು ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಗಳಿರುವುದು ಹಾಗೂ ಈ ಇದಕ್ಕೆ ಈ ಹಿಂದಿನ ಬಡ್ಡಿದರ ಏರಿಕೆಯ ನಿರ್ಧಾರ ಕಾರಣವಾಗಿರಬಹುದು ಎಂಬ ಕಾರಣದಿಂದ ಈಗ ಮತ್ತೆ ಪಾಲಿಸಿ ರೆಪೊದರಗಳನ್ನು ಏರಿಸುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗಿದೆ.
ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಆರು ಸದಸ್ಯರ ವಿತ್ತೀಯ ನೀತಿ ಸಮಿತಿಯ (ಎಂಪಿಸಿ) ಸಭೆ ಜೂನ್ 6 ರಿಂದ 8ರವರೆಗೆ ನಡೆಯಲಿದೆ. ಎಂಪಿಸಿಯ 43 ನೇ ಸಭೆಯ ನಿರ್ಧಾರವನ್ನು ಜೂನ್ 8 ರ ಗುರುವಾರ ಪ್ರಕಟಿಸಲಾಗುವುದು. ಏಪ್ರಿಲ್‌ನಲ್ಲಿ ನಡೆದ ಈ ಹಿಂದಿನ ಎಂಪಿಸಿ ಸಭೆಯ ನಂತರ, ಆರ್‌ಬಿಐ ತನ್ನ ದರ ಏರಿಕೆ ಚಕ್ರಕ್ಕೆ ಕಡಿವಾಣ ಹಾಕಿದೆ ಮತ್ತು ಮತ್ತು ರೆಪೊ ದರವನ್ನು 6.5 ಪ್ರತಿಶತದಲ್ಲಿ ಸ್ಥಿರವಾಗಿರಿಸಿದೆ. ಇದಕ್ಕೂ ಮುನ್ನ ಹಣದುಬ್ಬರವನ್ನು ನಿಯಂತ್ರಿಸುವ ಪ್ರಯತ್ನವಾಗಿ ಆರ್‌ಬಿಐ ಮೇ 2022 ರಿಂದ ಈವರೆಗೆ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಏಪ್ರಿಲ್‌ನಲ್ಲಿ ಗ್ರಾಹಕ ಬೆಲೆ ಆಧಾರಿತ (ಸಿಪಿಐ) ಹಣದುಬ್ಬರವು 18 ತಿಂಗಳ ಕನಿಷ್ಠ ಶೇಕಡಾ 4.7 ಕ್ಕೆ ಇಳಿಕೆಯಾಗಿರುವುದರ ಮಧ್ಯೆ ಈಗ ಎಂಪಿಸಿ ಸಭೆ ನಡೆಯಲಿದೆ. ಮೇ ತಿಂಗಳ ಸಿಪಿಐ ಅನ್ನು ಜೂನ್ 12 ರಂದು ಘೋಷಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್, ಆರ್‌ಬಿಐ ಬಡ್ಡಿದರಗಳ ಹೆಚ್ಚಳದ ವಿರಾಮವನ್ನು ಮುಂದುವರೆಸುವ ಸಾಧ್ಯತೆಯಿದೆ ಮತ್ತು ರೆಪೊ ದರವನ್ನು ಶೇಕಡಾ 6.5 ಕ್ಕೆ ಉಳಿಸಿಕೊಳ್ಳುವ ನಿರೀಕ್ಷೆಯಿದೆ ಎಂದರು. ಹಣದುಬ್ಬರವು ಏಪ್ರಿಲ್‌ನಲ್ಲಿ ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ ಮತ್ತು ಮೇ ತಿಂಗಳಲ್ಲಿ ಇನ್ನೂ ಕಡಿಮೆಯಾಗಲಿದೆ. ಈ ಸಂದರ್ಭದಲ್ಲಿ ಹಿಂದಿನ ರೆಪೋ ದರ ಹೆಚ್ಚಳ ಕ್ರಮಗಳು ಹಣದುಬ್ಬರದ ಮೇಲೆ ಪರಿಣಾಮ ಬೀರಿವೆ. ಹೀಗಾಗಿ ಮತ್ತೊಮ್ಮೆ ರೆಪೊ ದರ ಏರಿಕೆಯ ನಿರ್ಧಾರ ಕೈಗೊಳ್ಳದಿರಬಹುದು. ಈ ವರ್ಷಕ್ಕೆ ಸಂಬಂಧಿಸಿದಂತೆ ನೋಡುವುದಾದರೆ 25 ರಿಂದ 50 ಬಿಪಿಎಸ್ಗಳಷ್ಟು ರೆಪೊ ದರ ಕಡಿತವಾಗಬಹುದು. ಆದರೆ ಅದು ಅಕ್ಟೋಬರ್ ನಂತರವೇ ಆಗಬಹುದು ಎಂದು ಅವರು ತಿಳಿಸಿದರು.
ವಿತ್ತೀಯ ನೀತಿ ಸಮಿತಿ (MPC) ಎಂಬುದು ಕೇಂದ್ರ ಸರ್ಕಾರದಿಂದ ರಚಿತವಾದ ಮತ್ತು ಆರ್‌ಬಿಐ ಗವರ್ನರ್ ನೇತೃತ್ವದ ಸಮಿತಿಯಾಗಿದೆ. ನಿರ್ದಿಷ್ಟ ಗುರಿಯ ಮಟ್ಟದಲ್ಲಿ ಹಣದುಬ್ಬರವನ್ನು ತಡೆಯಲು ಮಾನದಂಡದ ಪಾಲಿಸಿ ರೆಪೊ ದರವನ್ನು (ರೆಪೋ ದರ) ನಿಗದಿಪಡಿಸುವ ಉದ್ದೇಶದಿಂದ ವಿತ್ತೀಯ ನೀತಿ ಸಮಿತಿಯನ್ನು ರಚಿಸಲಾಗಿದೆ. ಆರ್‌ಬಿಐ ಗವರ್ನರ್ ಆಂತರಿಕ ತಂಡ ಮತ್ತು ತಾಂತ್ರಿಕ ಸಲಹಾ ಸಮಿತಿಯ ಬೆಂಬಲ ಮತ್ತು ಸಲಹೆಯೊಂದಿಗೆ ವಿತ್ತೀಯ ನೀತಿ ನಿರ್ಧಾರಗಳನ್ನು ನಿಯಂತ್ರಿಸಲಾಗುತ್ತದೆ.
ಇದನ್ನೂ ಓದಿ : 43 ಸಾವಿರ ಕೋಟಿ ರೂ. ಎಫ್ಪಿಐ ಒಳಹರಿವು: ನಿಫ್ಟಿ50 ದಾಖಲೆ ಮಟ್ಟಕ್ಕೇರುವ ಸಾಧ್ಯತೆ