ಹೈದರಾಬಾದ್ : ಕಾರ್ಡ್‌ಗಳ ಬಳಕೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಾರ್ಡ್‌ದಾರರ ಹಕ್ಕುಗಳನ್ನು ರಕ್ಷಿಸಲು ಆರ್‌ಬಿಐ ನಿರಂತರವಾಗಿ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಇತ್ತೀಚೆಗೆ ಕೆಲವು ಬದಲಾವಣೆಗಳನ್ನು ತಂದಿದ್ದು, ಜೂನ್ 1ರಿಂದ ಅವುಗಳು ಜಾರಿಗೆ ಬಂದಿವೆ. RBI ತಂದಿರುವ ಹೊಸ ನಿಯಮಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಬ್ಯಾಂಕ್‌ಗಳು ಮತ್ತು NBFCಗಳ ಜೊತೆಗೆ ಕಾರ್ಡುದಾರರಿಗೂ ಕೆಲವೊಂದು ಹೊಣೆಗಾರಿಕೆಗಳನ್ನು ಜಾರಿಗೊಳಿಸಿದ್ದು, ಕಾರ್ಡ್ ನಿರ್ವಹಣೆಯಲ್ಲಿನ ದೋಷಗಳಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಬ್ಯಾಂಕ್‌ಗಳು ಹೊಣೆ ಆಗಿರುತ್ತವೆ ಎಂದು ತಿಳಿಸಿದೆ.
ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ : ಕಾರ್ಡ್ ಪ್ರಕಾರಗಳನ್ನು ಬದಲಾಯಿಸುವ, ಖರ್ಚು ಮಾಡಲು ಅನುಮತಿಸಲಾದ ಮೊತ್ತವನ್ನು ಹೆಚ್ಚಿಸುವ ಮತ್ತು ಇತ್ಯಾದಿ ಮೂಲಕ ಕ್ರೆಡಿಟ್ ಸ್ಕೋರ್, ಆದಾಯ, ಸಕಾಲಿಕ ಪಾವತಿಗಳು ಇತ್ಯಾದಿಗಳ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದಾಗಿ ಬ್ಯಾಂಕ್‌ಗಳು ಹೇಳುತ್ತವೆ. ಆದರೆ ಇಲ್ಲಿಯವರೆಗೆ ಈ ನಿರ್ಧಾರವನ್ನು ಬ್ಯಾಂಕ್‌ಗಳು ತಾವಾಗಿಯೇ ತೆಗೆದುಕೊಂಡು ಕಾರ್ಡ್‌ದಾರರಿಗೆ ನಂತರ ಕಾರ್ಡುದಾರರಿಗೆ ಮಾಹಿತಿ ನೀಡುತ್ತಿದ್ದವು. ಕೆಲವೊಮ್ಮೆ ಬ್ಯಾಂಕ್‌ಗಳು ಮನಬಂದಂತೆ ಕಾರ್ಡ್ಗಳನ್ನೂ ಕಳುಹಿಸುತ್ತಿದ್ದ ಉದಾಹರಣೆಗಳಿವೆ.
ಆದರೆ ಇನ್ನು ಮುಂದೆ ಇಂತಹ ಕಾರ್ಡ್‌ಗಳನ್ನು ನೀಡಲು ಬ್ಯಾಂಕ್‌ಗಳು ಕಾರ್ಡುದಾರರ ಅನುಮತಿ ಪಡೆಯಬೇಕು. ಕಾರ್ಡುದಾರರಿಗೆ ತಿಳಿಯದೆ ಮಿತಿಯನ್ನು ಹೆಚ್ಚಿಸಿ ಅದರ ಮೇಲೆ ಶುಲ್ಕ ವಿಧಿಸುವ ಅವಕಾಶ ಬ್ಯಾಂಕ್ಗಳಿಗಿರುವುದಿಲ್ಲ. ಒಂದು ವೇಳೆ ಮೊತ್ತ ಮರುಪಾವತಿ ಮಾಡುವುದರ ಜೊತೆಗೆ ಶುಲ್ಕ ವಿಧಿಸಿದರೆ, ಬ್ಯಾಂಕ್‌ಗಳು ಕಾರ್ಡ್‌ದಾರರಿಗೆ ಶುಲ್ಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದು ಕಾರ್ಡ್ ಲೋನ್ಗಳಿಗೂ ಅನ್ವಯಿಸುತ್ತದೆ. ಇಂತಹ ಸನ್ನಿವೇಶಗಳು ಸಂಭವಿಸಿದಲ್ಲಿ ಗ್ರಾಹಕರು ಆರ್‌ಬಿಐ ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸುವ ಅವಕಾಶವೂ ಇಲ್ಲಿದೆ.
ಕನಿಷ್ಠ ಪಾವತಿಯ ಅರಿವು : ಹೆಚ್ಚಿನ ಜನರು ತಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪೂರ್ಣವಾಗಿ ಪಾವತಿಸುವ ಬದಲು, ಸಾಮಾನ್ಯವಾಗಿ ಕಾರ್ಡ್ ಬ್ಯಾಲೆನ್ಸ್ನ ಶೇ. ಐದರವರೆಗೆ ಇರುವ ಕನಿಷ್ಠ ಬಾಕಿಯನ್ನಷ್ಟೇ ಪಾವತಿಸುತ್ತಾರೆ. ಈ ರೀತಿ ಕನಿಷ್ಠ ಮೊತ್ತವನ್ನಷ್ಟೇ ಪಾವತಿಸುವುದರಿಂದ ಹೆಚ್ಚಿನ ಬಡ್ಡಿಯ ಹೊರೆಯನ್ನು ಹೊರಬೇಕಾಗುತ್ತದೆ. ಹಾಗಾಗಿ ಈ ಬಗ್ಗೆ ಕಾರ್ಡ್ ವಿತರಕರು ಗ್ರಾಹಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆರ್‌ಬಿಐ ಸೂಚಿಸಿದೆ.
ಪ್ರತಿ ತಿಂಗಳು ಕನಿಷ್ಠ ಮೊತ್ತವನ್ನು ಪಾವತಿಸುವುದರಿಂದ ಬಾಕಿ ಇರುವ ಮೊತ್ತವನ್ನು ಪಾವತಿಸಲು ಕೆಲವು ವರ್ಷಗಳನ್ನು ಬೇಕಾಗುತ್ತದೆ ಎಂಬುದನ್ನು ಬ್ಯಾಂಕ್‌ಗಳು ಬಿಲ್‌ನಲ್ಲಿ ಸ್ಪಷ್ಟವಾಗಿ ಹೇಳಬೇಕು. ಈ ರೀತಿ ಹೇಳುವುದರಿಂದ ಗ್ರಾಹಕರು ತಮ್ಮ ಬಾಕಿ ಇರುವ ಮೊತ್ತವನ್ನು ತ್ವರಿತವಾಗಿ ಪಾವತಿಸುವಂತೆ ಪ್ರೇರೇಪಿಸಿ, ಅವರನ್ನು ಬಡ್ಡಿಯ ಹೊರೆಯಿಂದ ತಪ್ಪಿಸುವಂತೆ ಮಾಡುತ್ತದೆ ಎಂಬುದು ಆರ್‌ಬಿಐ ಅಭಿಪ್ರಾಯ.
ಪಾರದರ್ಶಕತೆ : ಹೊಸ ನಿಯಮಗಳ ಪ್ರಕಾರ, ಒಂದೇ ಪುಟದಲ್ಲಿ ಕ್ರೆಡಿಟ್ ಕಾರ್ಡ್‌ನ ಪ್ರಮುಖ ವಿವರಗಳನ್ನು ಒದಗಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ವಿವಿಧ ಸಂದರ್ಭಗಳಲ್ಲಿ ಅನ್ವಯವಾಗುವ ಶುಲ್ಕಗಳು, ಬ್ಯಾಲೆನ್ಸ್ ವರ್ಗಾವಣೆ, ವಿಳಂಬ ಪಾವತಿ ಶುಲ್ಕಗಳು ಮತ್ತು ಬಡ್ಡಿದರಗಳನ್ನು ಅದು ಒಳಗೊಂಡಿರಬೇಕು. ಒಂದು ವೇಳೆ ಹೊಸ ಶುಲ್ಕ ವಿಧಿಸಿದರೆ, ಅದರ ಬಗ್ಗೆ ಒಂದು ತಿಂಗಳ ಮುಂಚಿತವಾಗಿ ಕಾರ್ಡ್‌ದಾರರಿಗೆ ಮಾಹಿತಿ ಕೊಟ್ಟಿರಬೇಕು. ಒಂದು ವೇಳೆ ಹೊಸ ಶುಲ್ಕಗಳು ಕಾರ್ಡುದಾರರಿಗೆ ಹೊರೆಯಾಗುತ್ತದೆ ಎಂದು ಅನಿಸಿದರೆ ತಮ್ಮ ಕಾರ್ಡುಗಳನ್ನು ರದ್ದು ಮಾಡುವ ಹಕ್ಕು ಗ್ರಾಹಕರಿಗಿರುತ್ತದೆ.
ಗ್ರಾಹಕರು ಹೊಸ ಕಾರ್ಡ್ಗಾಗಿ ನೀಡುವ ಅರ್ಜಿಗಳನ್ನು ಬ್ಯಾಂಕ್ ತಿರಸ್ಕರಿಸಿದ್ದೇ ಆದರೆ, ಅದಕ್ಕೆ ಕಾರಣಗಳನ್ನು ಬ್ಯಾಂಕ್ ಲಿಖಿತ ರೂಪದಲ್ಲಿ ನೀಡಬೇಕು. ಒಂದು ವೇಳೆ ನಿರಾಕರಣೆಯ ಕಾರಣಗಳು ಗ್ರಾಹಕನಿಗೆ ತಿಳಿದಿದ್ದರೆ ಆ ವಿಷಯದಲ್ಲಿ ಜಾಗರೂಕರಾಗಿರುವ ಅವಕಾಶ ಅವರಿಗಿದೆ. ಉದಾಹರಣೆಗೆ, ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ, ಅರ್ಜಿದಾರರು ಅದನ್ನು ಹೆಚ್ಚಿಸಲು ಪ್ರಯತ್ನಿಸಬಹುದು.
ಕಾರ್ಡ್ ಕಳೆದುಹೋದರೆ? : ಕ್ರೆಡಿಟ್ ಕಾರ್ಡ್ ಎಲ್ಲಿಯಾದರೂ ಬಿದ್ದರೆ ಮತ್ತು ಅದರ ಮೂಲಕ ಅನಧಿಕೃತ ವಹಿವಾಟು ನಡೆದರೆ, ನಷ್ಟವನ್ನು ಭರಿಸಲು ವಿಮಾ ಪಾಲಿಸಿ ತೆಗೆದುಕೊಳ್ಳಬಹುದು. ಕಾರ್ಡ್ ಕಂಪನಿಗಳು ಗ್ರಾಹಕರ ಒಪ್ಪಿಗೆಯೊಂದಿಗೆ ಇವುಗಳನ್ನು ಒದಗಿಸಬಹುದು. ಕಾರ್ಡ್ ಮೋಸದ ವಹಿವಾಟಿಗೆ ಕಾರ್ಡ್ ನೀಡುವ ಕಂಪನಿಗಳು ಜವಾಬ್ದಾರರಾಗಿರುವುದಿಲ್ಲ. ಇದನ್ನು ವಿಮಾ ಕಂಪನಿಗಳು ನೋಡಿಕೊಳ್ಳುತ್ತವೆ. ಕಾರ್ಡ್ ಕಳೆದುಹೋದ ಮೂರು ದಿನಗಳಲ್ಲಿ ಕಾರ್ಡುದಾರರು ಬ್ಯಾಂಕ್‌ಗಳ ಗಮನಕ್ಕೆ ತರಬೇಕು. ಆಗ ಮಾತ್ರ ಆದ ಹಾನಿಗೆ ಪರಿಹಾರ ಪಡೆಯುವ ಹಕ್ಕು ಇರುತ್ತದೆ.
ಏಳು ದಿನಗಳ ಗಡುವು : ಕಾರ್ಡ್‌ದಾರರು ಕಾರ್ಡ್ ರದ್ದು ಮಾಡಲು ಬಯಸಿದರೆ, ಬ್ಯಾಂಕ್‌ಗಳು ಏಳು ದಿನಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇಲ್ಲದೇ ಹೋದಲ್ಲಿ ಎಂಟನೇ ದಿನದಿಂದ 500 ರೂ.ವರೆಗೆ ದಂಡವನ್ನು ಬ್ಯಾಂಕ್ಗೆ ವಿಧಿಸಲಾಗುತ್ತದೆ. ಆದರೆ ಕಾರ್ಡ್‌ದಾರರು ಪೂರ್ಣ ಮೊತ್ತವನ್ನು ಪಾವತಿಸಿದಾಗ ಮಾತ್ರ ಕಾರ್ಡ್ ರದ್ದುಗೊಳ್ಳುತ್ತದೆ. ಒಂದು ವೇಳೆ ಒಂದು ವರ್ಷ ಕಾರ್ಡ್ ಬಳಸದೇ ಇದ್ದರೆ ಅದನ್ನು ರದ್ದು ಮಾಡುವ ಅಧಿಕಾರ ಬ್ಯಾಂಕ್‌ಗಳಿಗೆ ಇದೆ.
ಆದರೆ ಹಾಗೆ ರದ್ದು ಮಾಡುವ ಮೊದಲು ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು 30 ದಿನಗಳ ನೋಟಿಸ್ ನೀಡಬೇಕಾಗುತ್ತದೆ. ಆಗಲೂ ಗ್ರಾಹಕರು ಸ್ಪಂದಿಸದಿದ್ದರೆ, ಕಾರ್ಡ್ ರದ್ದು ಮಾಡಬಹುದು. ಕಾರ್ಡ್ ಸ್ವೀಕರಿಸಿದ 30 ದಿನಗಳಲ್ಲಿ ಕಾರ್ಡ್ ಅನ್ನು ಸಕ್ರಿಯಗೊಳಿಸದಿದ್ದರೆ, ವಿತರಕರು ಅದನ್ನು OTP ಮೂಲಕ ಸಕ್ರಿಯಗೊಳಿಸಲು ಕೇಳುತ್ತಾರೆ. ಗ್ರಾಹಕರು ಆಗಲೂ ಪ್ರತಿಕ್ರಿಯಿಸದಿದ್ದರೆ, ಏಳು ದಿನಗಳ ನಂತರ ಕಾರ್ಡ್‌ಗೆ ಶುಲ್ಕ ವಿಧಿಸದೆ ಕಾರ್ಡ್ ಅನ್ನು ರದ್ದುಗೊಳಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಹೆಚ್ಚುತ್ತಿರುವ ಇಎಂಐಗಳನ್ನು ನಿಭಾಯಿಸಲು ಇಲ್ಲಿವೆ ಸುಲಭ ಉಪಾಯಗಳು!