ಸ್ಯಾನ್ ಫ್ರಾನ್ಸಿಸ್ಕೋ : ಗೂಗಲ್ ತನ್ನ ಪ್ಲೇ ಸ್ಟೋರ್ನ ಅಪ್ಲಿಕೇಶನ್‌ಗಳ ವೈಯಕ್ತಿಕ ಸಾಲ (ಪರ್ಸನಲ್ ಲೋನ್) ನೀತಿಯನ್ನು ಬದಲಾವಣೆ ಮಾಡುತ್ತಿದೆ. ಗೂಗಲ್ ಪ್ಲೇ ಸ್ಟೋರ್ನ ಹೊಸ ನಿಯಮದ ಪ್ರಕಾರ ಪರ್ಸನಲ್ ಲೋನ್ ನೀಡುವ ಆ್ಯಪ್ಗಳು ಸಾಲದ ಅರ್ಜಿಯ ಪ್ರಕ್ರಿಯೆ ಸಂದರ್ಭದಲ್ಲಿ ಇನ್ನು ಮುಂದೆ ಗ್ರಾಹಕರ ಕಾಂಟ್ಯಾಕ್ಟ್ ಡಿಟೇಲ್ಸ್ ಹಾಗೂ ಫೋಟೋಗಳನ್ನು ಪಡೆದುಕೊಳ್ಳುವಂತಿಲ್ಲ. ವೈಯಕ್ತಿಕ ಸಾಲಗಳನ್ನು ಒದಗಿಸುವ ಅಪ್ಲಿಕೇಶನ್‌ಗಳು ಬಳಕೆದಾರರ ಸಂಪರ್ಕಗಳು ಅಥವಾ ಫೋಟೋಗಳನ್ನು ಪಡೆಯಲಾಗದಂತೆ ನಾವು ನಮ್ಮ ವೈಯಕ್ತಿಕ ಸಾಲ ನೀತಿಯನ್ನು ನವೀಕರಿಸುತ್ತಿದ್ದೇವೆ ಎಂದು ಗೂಗಲ್ ಹೇಳಿದೆ.
ಫೋನ್ನಲ್ಲಿನ ಮೆಮೊರಿ ಸ್ಟೋರೆಜ್, ಫೋಟೋಗಳು, ವಿಡಿಯೋಗಳು, ಸಂಪರ್ಕ ಸಂಖ್ಯೆಗಳು, ನಿಖರವಾದ ಸ್ಥಳ ಮತ್ತು ಕಾಲ್ ಲಾಗ್‌ಗಳಿಗೆ ಪ್ರವೇಶವನ್ನು ತಡೆಯಲು Play Store ನಲ್ಲಿನ ಅಪ್ಲಿಕೇಶನ್‌ಗಳಿಗಾಗಿ ಗೂಗಲ್ ತನ್ನ ವೈಯಕ್ತಿಕ ಸಾಲ ನೀತಿಯಲ್ಲಿ ಬುಧವಾರ ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದೆ. ಈ ಬದಲಾವಣೆಯು ಮೇ 31 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್, ನೈಜೀರಿಯಾ, ಕೀನ್ಯಾ ಮತ್ತು ಪಾಕಿಸ್ತಾನದಲ್ಲಿ ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳಿಗೆ ಹೆಚ್ಚುವರಿ ನಿಯಮಗಳನ್ನು ಗೂಗಲ್ ಜಾರಿಗೆ ತಂದಿದೆ.
ಇನ್ನು ಮುಂದೆ ಭಾರತದಲ್ಲಿನ ಕಂಪನಿಗಳು ಪರ್ಸನಲ್ ಲೋನ್ ಆ್ಯಪ್ ಡಿಕ್ಲರೇಶನ್ ಅನ್ನು ಪೂರ್ಣಗೊಳಿಸಬೇಕಾಗುತ್ತದೆ ಮತ್ತು ತಮ್ಮ ಘೋಷಣೆಗೆ ಸಾಕ್ಷಿಯಾಗಿ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ. ಉದಾಹರಣೆಗೆ, ವೈಯಕ್ತಿಕ ಸಾಲಗಳನ್ನು ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪರವಾನಗಿ ಪಡೆದಿದ್ದರೆ ಅಂಥ ಪರವಾನಗಿಯ ಪ್ರತಿಯನ್ನು ಅವರು ಸಲ್ಲಿಸಬೇಕಾಗುತ್ತದೆ. ಗೂಗಲ್ ಈ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಿದೆ.
ಮಾರ್ಚ್‌ನಲ್ಲಿ ಗೂಗಲ್ ತನ್ನ ಹೊಸ ನೀತಿಯ ಅನುಷ್ಠಾನದ ನಂತರ ಕೀನ್ಯಾದಲ್ಲಿನ ತನ್ನ ಪ್ಲೇ ಸ್ಟೋರ್‌ನಿಂದ ನೂರಾರು ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿತ್ತು. ಡಿಜಿಟಲ್ ಸಾಲ ನೀಡುವ ಆ್ಯಪ್ಗಳು ಪರವಾನಗಿಯ ಪುರಾವೆಗಳನ್ನು ಪ್ರಸ್ತುತಪಡಿಸುವುದನ್ನು ಆ ದೇಶದಲ್ಲಿ ಕಡ್ಡಾಯ ಮಾಡಲಾಗಿದೆ. ಹಾಗೆಯೇ 2021 ರಲ್ಲಿ ಗೂಗಲ್ ಭಾರತದಲ್ಲಿ ನೂರಾರು ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿದ್ದು, ಅವುಗಳಲ್ಲಿ ಹಲವಾರು ಆ್ಯಪ್ಗಳು ಗೂಗಲ್ನ ಅಪ್ಲಿಕೇಶನ್ ನೀತಿಗಳನ್ನು ಉಲ್ಲಂಘಿಸುತ್ತಿದೆ ಎಂದು ಕಂಡು ಬಂದಿತ್ತು. ಅಂಥ ನೂರಾರು ಆ್ಯಪ್ಗಳನ್ನು ಗೂಗಲ್ ತೆಗೆದುಹಾಕಿತ್ತು.
ಪ್ರಸ್ತುತ ಪ್ಲೇ ಸ್ಟೋರ್ನಲ್ಲಿ ಉಳಿದ ಅಪ್ಲಿಕೇಶನ್‌ಗಳ ಡೆವಲಪರ್‌ಗಳು ಭಾರತದಲ್ಲಿ ಅನ್ವಯವಾಗುವ ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸುತ್ತಿರುವ ಬಗ್ಗೆ ಪುರಾವೆಗಳನ್ನು ಹಾಜರುಪಡಿಸುವಂತೆ ಅವರಿಗೆ ಗೂಗಲ್ ಸೂಚಿಸಿದೆ.
ಗೂಗಲ್ ಪ್ಲೇ ಎಂಬುದು ಆ್ಯಂಡ್ರಾಯ್ಡ್ನ ಅಧಿಕೃತ ಆನ್‌ಲೈನ್ ಸ್ಟೋರ್ ಆಗಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್ ಎಂದೂ ಕರೆಯಲಾಗುತ್ತದೆ. ಇದರ ಮೂಲಕ ನಿಮ್ಮ ಆ್ಯಂಡ್ರಾಯ್ಡ್ ಸಾಧನದಲ್ಲಿ ನೀವು ಲಕ್ಷಾಂತರ ಅಪ್ಲಿಕೇಶನ್‌ಗಳು, ಆಟಗಳು ಮತ್ತು ಇತರ ಮಾಧ್ಯಮಗಳನ್ನು ಡೌನ್‌ಲೋಡ್ ಮಾಡಬಹುದು ಅಥವಾ ಖರೀದಿಸಬಹುದು. ಪ್ಲೇ ಸ್ಟೋರ್‌ನಲ್ಲಿನ ಅಪ್ಲಿಕೇಶನ್ ಅಥವಾ ಪ್ಲೇ ಪುಟಕ್ಕೆ ನ್ಯಾವಿಗೇಟ್ ಮಾಡುವ ಮೂಲಕ ಮತ್ತು ಇನ್‌ಸ್ಟಾಲ್ ಟ್ಯಾಪ್ ಮಾಡುವ ಮೂಲಕ ನೀವು ಅಪ್ಲಿಕೇಶನ್‌ಗಳು ಅಥವಾ ಗೇಮ್ಗಳನ್ನು ಡೌನ್‌ಲೋಡ್ ಮಾಡಬಹುದು.
ಇದನ್ನೂ ಓದಿ : ಶಾಸಕರ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ: ಪ್ರಕರಣ ದಾಖಲು