ನವದೆಹಲಿ: 10 ನಿಮಿಷದೊಳಗೆ ಮನೆ ಬಾಗಿಲಿಗೆ ಪ್ರಿಂಟೌಟ್ಗಳನ್ನು ತಲುಪಿಸುವ ಸೇವೆಯನ್ನು ಆರಂಭಿಸುತ್ತಿರುವುದಾಗಿ ಜೊಮ್ಯಾಟೊ ಮಾಲೀಕತ್ವದ ಬ್ಲಿಂಕಿಟ್ ಆ್ಯಪ್ ಘೋಷಿಸಿದೆ. ಮಕ್ಕಳ ಪಾಲಕರು ಹಾಗೂ ವೃತ್ತಿಪರಿಗೆ ಇದರಿಂದ ಸಾಕಷ್ಟು ಅನುಕೂಲವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಸೇವೆಯು ಸದ್ಯಕ್ಕೆ ಕೆಲವೇ ಆಯ್ದ ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ ಎಂದು ಬ್ಲಿಂಕಿಟ್ ತಿಳಿಸಿದೆ.
ಎಲ್ಲರ ಮನೆಯಲ್ಲಿ ಪ್ರಿಂಟರ್ ಇರುವುದು ಸಾಧ್ಯವಿಲ್ಲ. ಸೈಬರ್ ಕೆಫೆ ಅಥವಾ ಹತ್ತಿರದ ಇನ್ನಾವುದೋ ಕಂಪ್ಯೂಟರ್ ಸೆಂಟರಿಗೆ ಹೋಗಿ ಪ್ರಿಂಟೌಟ್ ತೆಗೆಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಅದರಲ್ಲೂ ಅರ್ಜೆಂಟಾಗಿ ಪ್ರಿಂಟೌಟ್ ಬೇಕಾಗಿರುವಾಗ ಅದಕ್ಕಾಗಿ ಎಲ್ಲೆಲ್ಲೋ ಸುತ್ತಾಡುವುದು ಕಷ್ಟದ ಕೆಲಸ ಎನ್ನುತ್ತಾರೆ ಬ್ಲಿಂಕಿಟ್ ಪ್ರಾಡಕ್ಟ್ ಮ್ಯಾನೇಜರ್ ಜಿತೇಶ್ ಗೋಯಲ್.
ಕಡಿಮೆ ದರದಲ್ಲಿ ಸೇವೆ: ನಿಜವಾಗಿಯೂ ಇದು ತುಂಬಾ ಉಪಯುಕ್ತವಾಗಲಿದೆ. ಅದರಲ್ಲೂ ತುಂಬಾ ಕಡಿಮೆ ದರದಲ್ಲಿ ನಾವು ಈ ಸೇವೆ ನೀಡಲಿದ್ದೇವೆ. ನೀವು ಫೈಲ್ ಅನ್ನು ಕೇವಲ ಅಪ್ಲೋಡ್ ಮಾಡಿದರೆ ಸಾಕು. ಕೆಲವೇ ನಿಮಿಷಗಳಲ್ಲಿ ನಾವು ಪ್ರಿಂಟೌಟ್ ಅನ್ನು ನಿಮಗೆ ತಲುಪಿಸುತ್ತೇವೆ. ಈ ಸೇವೆಯನ್ನು ಒಂದ್ಸಲ ಟ್ರೈ ಮಾಡಿ, ನಿಮ್ಮ ಫೀಡಬ್ಯಾಕ್ ಹಂಚಿಕೊಳ್ಳಿ ಎಂದು ಜಿತೇಶ್ ಲಿಂಕ್ಡ್ಇನ್ನಲ್ಲಿ ಬರೆದಿದ್ದಾರೆ.
ಜೊಮ್ಯಾಟೊ ತನ್ನ ಹಾಗೂ ಬ್ಲಿಂಕಿಟ್ ಗ್ರಾಹಕರಿಗೆ ಏಕಕಾಲಕ್ಕೆ ಸೇವೆಗಳನ್ನು ಒದಗಿಸುವ ಪ್ರಯೋಗಗಳನ್ನು ಮಾಡುತ್ತಿದೆ. ಅದರ ಭಾಗವಾಗಿಯೇ ಈ ಹೊಸ ಸೇವೆಯನ್ನು ಆರಂಭಿಸಲಾಗುತ್ತಿದೆ. ಬ್ಯಾಕ್ ಎಂಡ್ನಲ್ಲಿರುವ ನಮ್ಮ ಡೆಲಿವರಿ ಸೌಲಭ್ಯಗಳನ್ನು ಸಂಯೋಜಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ತಂತ್ರಜ್ಞಾನ ಸಂಯೋಜನೆಗಳಿಂದ ಎರಡೂ ಕಂಪನಿಗಳ ಸೇವೆಯ ವೇಗ ವರ್ಧಿಸಲಿದೆ ಎಂದು ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಓ ದೀಪಿಂದರ್ ಗೋಯಲ್ ಇತ್ತೀಚೆಗೆ ಹೇಳಿದ್ದರು.
ನಷ್ಟ ಕಡಿಮೆ ಮಾಡಿಕೊಳ್ಳುತ್ತಿರುವ ಕಂಪನಿ: ಕಂಪನಿಯ ಪ್ರಕಾರ- ತಿಂಗಳುಗಳು ಕಳೆದಂತೆ ಬ್ಲಿಂಕಿಟ್ ನಷ್ಟಗಳು ಕಡಿಮೆಯಾಗುತ್ತಿವೆ. ಜನೆವರಿಯಲ್ಲಿ 2,040 ಕೋಟಿ ರೂಪಾಯಿ ಇದ್ದ ನಷ್ಟ ಜುಲೈ ವೇಳೆಗೆ 929 ಮಿಲಿಯನ್ ರೂಪಾಯಿಗಳಿಗೆ ಇಳಿಕೆಯಾಗಿದೆ. ಇನ್ನು ಅಗತ್ಯವಿಲ್ಲದ ಹಲವಾರು ಡಾರ್ಕ್ ಸ್ಟೋರ್ಗಳನ್ನು ಬ್ಲಿಂಕಿಟ್ ಬಂದ್ ಮಾಡಿದೆ ಎಂದು ಕಂಪನಿ ಹೇಳಿದೆ.
ಕೇವಲ ಆರು ತಿಂಗಳಲ್ಲಿ ಬ್ಲಿಂಕಿಟ್ ಆಹಾರ ಪೂರೈಕೆ ವ್ಯವಹಾರವು ಜೊಮ್ಯಾಟೊದ ಶೇ 20ರಷ್ಟು ತಲುಪಿದೆ. ಕೇವಲ 15 ನಗರಗಳಲ್ಲಿ ಕಾರ್ಯಾಚರಣೆ ಹೊಂದಿದ್ದರೂ ಬ್ಲಿಂಕಿಟ್ ಈ ಸಾಧನೆ ಮಾಡಿದೆ. 10 ನಿಮಿಷದಲ್ಲಿ ಸರಕು ಪೂರೈಕೆ ಮಾಡುವ ಬ್ಲಿಂಕಿಟ್ ಆ್ಯಪ್ ಅನ್ನು ಜೊಮ್ಯಾಟೊ 4,447 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು.
ಇದನ್ನು ಓದಿ:ಬಾಕಿ ಪಾವತಿಸಿದ ತಕ್ಷಣ 5G ಸ್ಪೆಕ್ಟ್ರಮ್: ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ ಸುನಿಲ್ ಮಿತ್ತಲ್