ನವದೆಹಲಿ: ರಷ್ಯಾದಿಂದ ಭಾರತದ ಕಚ್ಚಾ ತೈಲ ಆಮದು ಏಪ್ರಿಲ್ನಿಂದ 50 ಪಟ್ಟು ಹೆಚ್ಚಾಗಿದೆ. ಅದರಲ್ಲೂ ಈಗ ವಿದೇಶದಿಂದ ಖರೀದಿಸುತ್ತಿರುವ ಒಟ್ಟು ಕಚ್ಚಾ ತೈಲದ ಪೈಕಿ ಇದು ಶೇಕಡಾ 10ರಷ್ಟು ಪಾಲು ಹೊಂದಿದೆ ಎಂದು ಹಿರಿಯ ಕೇಂದ್ರ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಕ್ರೇನ್ ವಿರುದ್ಧದ ಯುದ್ಧಕ್ಕೂ ಮೊದಲು ಭಾರತವು ಆಮದು ಮಾಡಿಕೊಂಡ ಒಟ್ಟಾರೆ ತೈಲ ಪ್ರಮಾಣದಲ್ಲಿ ರಷ್ಯಾದ ಪಾಲು ಶೇ 0.2 ರಷ್ಟಿತ್ತು.
ಈ ಪೈಕಿ, ಶೇ40 ರಷ್ಟು ತೈಲವನ್ನು ಖಾಸಗಿ ರಿಫೈನರ್ಸ್‌ಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರೋಸ್ನೆಫ್ಟ್ ಬೆಂಬಲಿತ ನಯಾರಾ ಎನರ್ಜಿ ಖರೀದಿಸಿದೆ. ಕಳೆದ ತಿಂಗಳು ರಷ್ಯಾವು ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಇರಾಕ್‌ನ ನಂತರ ಭಾರತಕ್ಕೆ ತೈಲ ಪೂರೈಕೆ ಮಾಡುವುದರಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಉಕ್ರೇನ್ ಯುದ್ಧದ ನಂತರ ಹೆಚ್ಚು ರಿಯಾಯಿತಿಯಲ್ಲಿ ಲಭ್ಯವಿರುವ ರಷ್ಯಾದ ಕಚ್ಚಾ ತೈಲವನ್ನು ದೇಶೀಯ ಸಂಸ್ಕರಣಾಗಾರರು ಹೆಚ್ಚೆಚ್ಚು ಆಮದು ಮಾಡಿಕೊಂಡಿದ್ದಾರೆ. ಭಾರತೀಯ ಸಂಸ್ಕರಣಾಗಾರರು ಮೇ ತಿಂಗಳಲ್ಲಿ ಸುಮಾರು 25 ಮಿಲಿಯನ್ ಬ್ಯಾರೆಲ್ ತೈಲವನ್ನು ರಷ್ಯಾದಿಂದಲೇ ಖರೀದಿಸಿದ್ದಾರೆ. ಮೇ ತಿಂಗಳಲ್ಲಿ ಇರಾಕ್ ಭಾರತಕ್ಕೆ ಅಗ್ರ ತೈಲ ಪೂರೈಕೆದಾರನಾಗಿತ್ತು. ಸೌದಿ ಅರೇಬಿಯಾ ಈಗ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಜಾಗತಿಕ ಇಂಧನ ಬೆಲೆಗಳು ಏರುತ್ತಿರುವ ಸಮಯದಲ್ಲಿ ರಷ್ಯಾದಿಂದ ತೈಲಾಮದು ಹೆಚ್ಚಿಸಲು ಭಾರತ ಈ ರಿಯಾಯಿತಿ ಬೆಲೆಗಳ ಲಾಭ ಪಡೆದುಕೊಂಡಿದೆ. ಜಾಗತಿಕವಾಗಿ ಅಮೆರಿಕ ಮತ್ತು ಚೀನಾ ನಂತರ ಭಾರತ ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕನಾಗಿದೆ.
ಉಕ್ರೇನ್ ಮೇಲಿನ ಆಕ್ರಮಣದ ನಂತರ ರಷ್ಯಾದ ಕಚ್ಚಾ ತೈಲಕ್ಕೆ ಜಗತ್ತಿನಲ್ಲಿ ಬೇಡಿಕೆ ಕಡಿಮೆಯಾಗಿದೆ. ಕೆಲವು ವಿದೇಶಿ ಸರ್ಕಾರಗಳು ಮತ್ತು ಕಂಪನಿಗಳು ಆ ದೇಶದ ಇಂಧನ ಆಮದುಗಳಿಂದ ದೂರ ಉಳಿದುಕೊಂಡಿವೆ. ಪರಿಣಾಮ ರಷ್ಯಾ ತೈಲ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಇದನ್ನೂ ಓದಿ: ನಿರಂತರವಾಗಿ ಪತ್ತೆಯಾಗುತ್ತಿವೆ ಜಿಂಕೆಗಳ ಕಳೇಬರ: ಈವರೆಗೆ 13 ಸಾವು