ನವದೆಹಲಿ: ಭಾರತದ ಇ-ಚಿಲ್ಲರೆ (e-retail) ಮಾರುಕಟ್ಟೆ (ಆಫ್ಲೈನ್ ಮತ್ತು ಆನ್ಲೈನ್ ಚಾನೆಲ್ಗಳು) 2028 ರ ವೇಳೆಗೆ 160 ಬಿಲಿಯನ್ ಡಾಲರ್ ಮೌಲ್ಯವನ್ನು ದಾಟುವ ನಿರೀಕ್ಷೆಯಿದೆ ಎಂದು ವರದಿಯೊಂದು ಬುಧವಾರ ತೋರಿಸಿದೆ. (ಭಾರತದ ರೂಪಾಯಿ ಲೆಕ್ಕದಲ್ಲಿ ಇದು ಸುಮಾರು 13ಲಕ್ಷ ಕೋಟಿ ರೂಪಾಯಿ ವ್ಯವಹಾರ ಆಗುತ್ತದೆ) ಸುಧಾರಿತ ಭೌತಿಕ ಮತ್ತು ಡಿಜಿಟಲ್ ಸೌಲಭ್ಯ, ಹೆಚ್ಚಾದ ಕೈಗೆಟುಕುವಿಕೆ, ಅನುಕೂಲತೆ ಮತ್ತು ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಯ ಕಾರಣದಿಂದ ಇ-ರಿಟೇಲ್ ಮಾರುಕಟ್ಟೆ ಬೆಳವಣಿಗೆಯಾಗಲಿದೆ ಎಂದು ವರದಿ ತಿಳಿಸಿದೆ.
ಕೊರೊನಾ ಸಾಂಕ್ರಾಮಿಕದ ನಂತರದ ಅವಧಿಯಲ್ಲಿ ಮಾರುಕಟ್ಟೆಯು ಬಲವಾದ ಬೆಳವಣಿಗೆ ಕಾಣುತ್ತಿದ್ದು, 2023 ರಲ್ಲಿ ಅಂದಾಜು $ 57 ರಿಂದ $ 60 ಬಿಲಿಯನ್ ವಹಿವಾಟು ನಡೆದಿದೆ. ಫ್ಲಿಪ್ಕಾರ್ಟ್ ಸಹಯೋಗದೊಂದಿಗೆ ಬೈನ್ & ಕಂಪನಿ ತಯಾರಿಸಿದ ವರದಿಯ ಪ್ರಕಾರ, ಇ-ರಿಟೇಲ್ ಮಾರುಕಟ್ಟೆ 2020 ರಿಂದ ವಾರ್ಷಿಕ 8 ರಿಂದ 12 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ.
ಮುಂಬರುವ ವರ್ಷಗಳಲ್ಲಿ ಇ-ರಿಟೇಲ್ ಮಾರುಕಟ್ಟೆಯು ಮತ್ತಷ್ಟು ಬೆಳವಣಿಗೆಯಾಗಲು ಸಜ್ಜಾಗಿದೆ. ಸದ್ಯ ಭಾರತೀಯರು ಮಾಡುವ ಒಟ್ಟಾರೆ ಚಿಲ್ಲರೆ ಖರೀದಿಯ ಖರ್ಚಿನ ಪೈಕಿ ಆನ್ಲೈನ್ ಮೂಲಕ ಮಾಡುವ ವೆಚ್ಚ ಶೇಕಡಾ 5 ರಿಂದ 6 ರಷ್ಟಿದೆ. ಇದು ಅಮೆರಿಕದಲ್ಲಿ ಶೇಕಡಾ 23 ರಿಂದ 24 ಮತ್ತು ಚೀನಾದಲ್ಲಿ ಶೇಕಡಾ 35 ಕ್ಕಿಂತ ಹೆಚ್ಚಾಗಿದೆ. ಅಂದರೆ ಭಾರತದಲ್ಲಿ ಆನ್ಲೈನ್ ಇ-ರಿಟೇಲ್ ಮಾರುಕಟ್ಟೆಯ ಬೆಳವಣಿಗೆಗೆ ಇನ್ನೂ ಸಾಕಷ್ಟು ಅವಕಾಶವಿದೆ.
ಆನ್ಲೈನ್ ಚಾನೆಲ್ ಬೆಳೆದರೂ ಆಫ್ಲೈನ್ ಚಾನೆಲ್ ನಿರ್ಣಾಯಕವಾಗಿ ಮುಂದುವರಿಯಲಿದೆ. ಭಾರತದ ಚಿಲ್ಲರೆ ಖರೀದಿ ವೆಚ್ಚದ ಬಹುಪಾಲು (94 ರಿಂದ 95 ಪ್ರತಿಶತ) ಆಫ್ಲೈನ್ನಲ್ಲಿಯೇ ಮುಂದುವರೆದಿದೆ. ಸಾಮಾನ್ಯ ವ್ಯಾಪಾರವು ಒಟ್ಟಾರೆ ಚಿಲ್ಲರೆ ವೆಚ್ಚದ ಶೇಕಡಾ 87 ರಷ್ಟಿದೆ. ಒಂದೆಡೆ ಚಿಲ್ಲರೆ ವ್ಯಾಪಾರಿಗಳು ಆಫ್ಲೈನ್ ಉಪಸ್ಥಿತಿಯನ್ನು ಬೆಳೆಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಆನ್ಲೈನ್ನಲ್ಲಿ ಮೊದಲ ಬಾರಿಗೆ ಬಂದವರು ವಹಿವಾಟು ಪ್ರಮಾಣ ಹೆಚ್ಚಿಸಲು ಓಮ್ನಿ-ಚಾನೆಲ್ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಭಾರತದಲ್ಲಿ ಮಾರಾಟಗಾರರ ವ್ಯವಸ್ಥೆಯು ವೇಗವಾಗಿ ವಿಸ್ತರಿಸುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2022 ರಲ್ಲಿ ಎರಡು ಪಟ್ಟು ಹೆಚ್ಚು ಮಾರಾಟಗಾರರು ಪ್ಲಾಟ್ಫಾರ್ಮ್ಗಳಿಗೆ ಬಂದಿದ್ದಾರೆ. ಈ ಹೊಸ ಮಾರಾಟಗಾರರ ಪೈಕಿ ಸುಮಾರು ಮೂರನೇ ಎರಡರಷ್ಟು ಜನರು ಶ್ರೇಣಿ 2+ ನಗರಗಳವರಾಗಿದ್ದಾರೆ ಮತ್ತು ಸುಮಾರು ಮುಕ್ಕಾಲು ಭಾಗದಷ್ಟು ಜೀವನಶೈಲಿ ವಸ್ತುಗಳು, ಮನೆ ಮತ್ತು ಎಲೆಕ್ಟ್ರಾನಿಕ್ಸ್ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಂಶೋಧನೆಗಳು ತೋರಿಸಿವೆ.
ಇದನ್ನೂ ಓದಿ : ಅಕ್ಟೋಬರ್ನಲ್ಲಿ 16 ತಿಂಗಳ ಗರಿಷ್ಠ ಮಟ್ಟಕ್ಕೆ ಕೈಗಾರಿಕಾ ಬೆಳವಣಿಗೆ: ಚಿಲ್ಲರೆ ಹಣದುಬ್ಬರ ಏರಿಕೆ