ಮುಂಬೈ : ಪ್ರಸಕ್ತ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ ಕಡಿಮೆಯಾಗಿದೆ ಎಂದು ಆರ್ಬಿಐ ಮಂಗಳವಾರ ತಿಳಿಸಿದೆ. 2023-24ರ ಎರಡನೇ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆ (ಸಿಎಡಿ) 8.3 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇಕಡಾ 1 ರಷ್ಟಿದೆ. ಇದು ಇದಕ್ಕಿಂತ ಹಿಂದಿನ ತ್ರೈಮಾಸಿಕದಲ್ಲಿ 9.2 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇಕಡಾ 1.1 ರಷ್ಟಿತ್ತು. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆ 30.9 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇಕಡಾ 3.8 ರಷ್ಟಿತ್ತು.
ಸರಕು ವ್ಯಾಪಾರ ಕೊರತೆಯು ಈ ತ್ರೈಮಾಸಿಕದಲ್ಲಿ 61 ಬಿಲಿಯನ್ ಡಾಲರ್ಗೆ ಇಳಿದಿದೆ. ಇದು ಹಿಂದಿನ ವರ್ಷದ ತ್ರೈಮಾಸಿಕದಲ್ಲಿ 78.3 ಬಿಲಿಯನ್ ಡಾಲರ್ ಆಗಿತ್ತು. ಪ್ರಸಕ್ತ ತ್ರೈಮಾಸಿಕದಲ್ಲಿ ಕಚ್ಚಾ ತೈಲ ಬೆಲೆಗಳ ಕುಸಿತದಿಂದಾಗಿ ದೇಶದ ತೈಲ ಆಮದು ವೆಚ್ಚ ಕಡಿಮೆಯಾಗಿದೆ ಹಾಗೂ ಇದೇ ಕಾರಣದಿಂದ ವ್ಯಾಪಾರ ಕೊರತೆಯೂ ಇಳಿಕೆಯಾಗಿದೆ.
ಸಾಫ್ಟ್ವೇರ್, ವ್ಯವಹಾರ ಮತ್ತು ಪ್ರಯಾಣ ಸೇವೆಗಳ ರಫ್ತು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೇವಾ ವಲಯದ ರಫ್ತು ವರ್ಷದಿಂದ ವರ್ಷಕ್ಕೆ ಶೇಕಡಾ 4.2 ರಷ್ಟು ಹೆಚ್ಚಾಗಿದೆ. ನಿವ್ವಳ ಸೇವೆಗಳ ಸ್ವೀಕೃತಿಗಳು ಅನುಕ್ರಮವಾಗಿ ಮತ್ತು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿವೆ ಎಂದು ಆರ್ಬಿಐ ತಿಳಿಸಿದೆ.
ಖಾಸಗಿ ಹಣ ವರ್ಗಾವಣೆ ಅಂದರೆ ಮುಖ್ಯವಾಗಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಭಾರತೀಯರು ದೇಶಕ್ಕೆ ಕಳುಹಿಸುವ ಹಣದ ಪ್ರಮಾಣ 28.1 ಬಿಲಿಯನ್ ಡಾಲರ್ ಆಗಿದ್ದು, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಇದ್ದ ಮಟ್ಟದಿಂದ ಶೇಕಡಾ 2.6 ರಷ್ಟು ಹೆಚ್ಚಾಗಿದೆ. 2022-23ರ ಎರಡನೇ ತ್ರೈಮಾಸಿಕದಲ್ಲಿ 2.5 ಬಿಲಿಯನ್ ಡಾಲರ್ ನಿವ್ವಳ ಒಳಹರಿವಿಗೆ ಹೋಲಿಸಿದರೆ, ಎನ್ಆರ್ಐ ಠೇವಣಿಗಳು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 3.2 ಬಿಲಿಯನ್ ಡಾಲರ್ ನಿವ್ವಳ ಒಳಹರಿವನ್ನು ದಾಖಲಿಸಿವೆ.
2022-23ರ ಎರಡನೇ ತ್ರೈಮಾಸಿಕದಲ್ಲಿ ಇದ್ದ 30.4 ಬಿಲಿಯನ್ ಡಾಲರ್ಗೆ ಹೋಲಿಸಿದರೆ 2023-24ರ ಎರಡನೇ ತ್ರೈಮಾಸಿಕದಲ್ಲಿ ವಿದೇಶಿ ವಿನಿಮಯ ಮೀಸಲು (ಬಿಒಪಿ ಆಧಾರದ ಮೇಲೆ) 2.5 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಚಾಲ್ತಿ ಖಾತೆ ಕೊರತೆ ಅಥವಾ ಸಿಎಡಿ ಎಂದರೆ ರಫ್ತುಗಳಿಂದ ಬರುವ ಹಣ ಮತ್ತು ಆಮದಿನಿಂದ ಹೊರಹೋಗುವ ಹಣದ ನಡುವಿನ ವ್ಯತ್ಯಾಸವಾಗಿದೆ.
ಇದನ್ನೂ ಓದಿ : ಜೊಮಾಟೊ 2023 ಟ್ರೆಂಡ್ಸ್; ಬಿರಿಯಾನಿಗಾಗಿ 10 ಕೋಟಿ ಆರ್ಡರ್, 2ನೇ ಸ್ಥಾನದಲ್ಲಿ ಪಿಜ್ಜಾ