ನವದೆಹಲಿ: 'ಹಣದ ರಾಜ' ಎಂದೇ ಕರೆಯಲಾಗುವ ಡಾಲರ್ ಸದ್ಯ ಎಲ್ಲ ಕರೆನ್ಸಿಗಳಿಗಿಂತಲೂ ದುಬಾರಿಯಾಗಿದೆ. ಡಾಲರ್ನಲ್ಲೇ ವಿದೇಶಿ ವಹಿವಾಟು ನಡೆಯುತ್ತದೆ. ಆದರೆ, ಇದನ್ನು ತಗ್ಗಿಸಲು ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ಭಾರತಕ್ಕೆ ಪ್ರಮುಖ ಇಂಧನ ಪೂರೈಕೆದಾರ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಿಂದ ಖರೀದಿಸಿದ ಕಚ್ಚಾತೈಲ ಬಿಲ್ ಅನ್ನು ರೂಪಾಯಿಯಲ್ಲೇ ಪಾವತಿಸಿದೆ. ಇದು ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ.
ಕಳೆದ ಬಾರಿ ಯುಎಇ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಜೊತೆ ಆಯಾ ದೇಶಗಳ ಕರೆನ್ಸಿಗಳಲ್ಲಿ ವ್ಯಾಪಾರ ಮಾಡುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಈಗ ಯುಎಇಯಿಂದ ಖರೀದಿಸಿದ ಕಚ್ಚಾತೈಲಕ್ಕೆ ರೂಪಾಯಿಯಲ್ಲೇ ಹಣ ಸಂದಾಯ ಮಾಡಲಾಗಿದೆ.
ಅಬುಧಾಬಿಯ ನ್ಯಾಷನಲ್ ಆಯಿಲ್ ಕಂಪನಿಯಿಂದ ಖರೀದಿಸಲಾದ 1 ಮಿಲಿಯನ್ ಬ್ಯಾರೆಲ್ ಕಚ್ಚಾತೈಲಕ್ಕೆ ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸೋಮವಾರ ರೂಪಾಯಿಯಲ್ಲಿ ವಹಿವಾಟು ನಡೆಸಿದೆ. ಇದನ್ನು ಭಾರತದಲ್ಲಿರುವ ಯುಎಇ ರಾಯಭಾರಿ ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
1 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಖರೀದಿ: ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಹೊಸದಾಗಿ ಜಾರಿಗೆ ತಂದ ಲೋಕಲ್ ಕರೆನ್ಸಿ ಸೆಟಲ್‌ಮೆಂಟ್ (ಎಲ್‌ಸಿಎಸ್) ವ್ಯವಸ್ಥೆಯಡಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ ಮೊಟ್ಟಮೊದಲ ಬಾರಿಗೆ ಕಚ್ಚಾ ತೈಲ ವಹಿವಾಟನ್ನು ಆಯಾ ದೇಶದ ಕರೆನ್ಸಿಯಲ್ಲೇ ನಡೆಸಲಾಗಿದೆ. ಈ ವಹಿವಾಟಿನಲ್ಲಿ ಸುಮಾರು 1 ಮಿಲಿಯನ್ ಬ್ಯಾರೆಲ್‌ಗಳ ಕಚ್ಚಾತೈಲದ ಮಾರಾಟವನ್ನು ಒಳಗೊಂಡಿತ್ತು. ವಹಿವಾಟಿಗೆ ಭಾರತೀಯ ರೂಪಾಯಿ ಮತ್ತು ಯುಎಇಯ ದಿರ್ಹಾಮ್‌ಗಳನ್ನು ಬಳಸಲಾಗಿದೆ ಎಂದು ತಿಳಿಸಿದೆ.
ಯುಎಇಗೆ ಪ್ರಧಾನಿ ಭೇಟಿ ನೀಡಿದ್ದ ವೇಳೆ, ಸ್ಥಳೀಯ ಕರೆನ್ಸಿಗಳಿಂದ ವ್ಯಾಪಾರ ಭಾರತ - ಯುಎಇ ಸಹಕಾರದ ಅತ್ಯಂತ ಪ್ರಮುಖ ಅಂಶವಾಗಿದೆ. ಇದು ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಅಂತರರಾಷ್ಟ್ರೀಯ ಹಣಕಾಸು ವಹಿವಾಟನ್ನು ಸರಳಗೊಳಿಸುತ್ತದೆ ಎಂದು ಹೇಳಿದ್ದರು. ಭಾರತ ಮತ್ತು ಯುಎಇ ತೈಲ, ಅನಿಲ ಪೂರೈಕೆಯ ಪ್ರಮುಖ ಪಾಲುದಾರ ರಾಷ್ಟ್ರಗಳಾಗಿವೆ. ಯುಎಇ ಭಾರತದ ಪ್ರಮುಖ ಇಂಧನ ಪೂರೈಕೆದಾರ ರಾಷ್ಟ್ರ. ಪೆಟ್ರೋಲ್, ಪೆಟ್ರೋಲಿಯಂ ಉತ್ಪನ್ನಗಳು ಉಭಯ ದೇಶಗಳ ನಡುವಿನ ಪ್ರಮುಖ ವಹಿವಾಟಾಗಿದೆ.
ಚಿನ್ನ ಖರೀದಿಯಲ್ಲಿ ರೂಪಾಯಿ ಬಳಕೆ: ಕಚ್ಚಾತೈಲ ವಹಿವಾಟಿಗೂ ಮೊದಲು ಜುಲೈನಲ್ಲಿ ಚಿನ್ನ ಖರೀದಿಗೆ ರೂಪಾಯಿ ಬಳಕೆ ಮಾಡಲಾಗಿತ್ತು. ಚಿನ್ನದ ರಫ್ತುದಾರರಿಂದ 25 ಕೆಜಿ ಚಿನ್ನವನ್ನು ಭಾರತದಲ್ಲಿನ ಖರೀದಿದಾರರಿಗೆ ಸುಮಾರು 12.84 ಕೋಟಿ ರೂಪಾಯಿಗಳಿಗೆ ಯುಎಇ ಮಾರಾಟ ಮಾಡಿತ್ತು.
ರಷ್ಯಾ, ಯುಎಇ ಸೇರಿದಂತೆ 29 ರಾಷ್ಟ್ರಗಳು ಭಾರತ ರೂಪಾಯಿಯಲ್ಲೇ ವಹಿವಾಟು ನಡೆಸಲು ಮುಂದಾಗಿವೆ. ಅಂತಾರಾಷ್ಟ್ರೀಯ ವಹಿವಾಟು ಕುಸಿಯುತ್ತಿರುವ ಕಾರಣ ಹಲವು ದೇಶಗಳು ಡಾಲರ್ ಬದಲಾಗಿ ದೇಶಗಳ ಕರೆನ್ಸಿಯಲ್ಲೇ ವ್ಯಾಪಾರ ವಹಿವಾಟು ನಡೆಸಲು ಒಪ್ಪಂದ ಮಾಡಿಕೊಂಡಿವೆ. ಇದರಿಂದ ಆ ದೇಶಗಳ ಮೇಲೆ ಅಮೆರಿಕದ ಡಾಲರ್ ಪ್ರಭಾವ ತಗ್ಗಿಸಲು ಇದು ಸುಲಭ ಮಾರ್ಗವಾಗಿದೆ.
ಇದನ್ನೂ ಓದಿ: Inflation: ಆಹಾರ ವಸ್ತುಗಳ ಬೆಲೆಯೇರಿಕೆಯಿಂದ ಚಿಲ್ಲರೆ ಹಣದುಬ್ಬರ ಶೇ 7.44ಕ್ಕೆ ಏರಿಕೆ!