ಹೈದರಾಬಾದ್: ಬ್ಯಾಂಕ್‌ಗಳು ಸಾಮಾನ್ಯವಾಗಿ ಅರ್ಜಿದಾರರ ಆದಾಯದ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. ವ್ಯಕ್ತಿಯ ಮಾಸಿಕ ಆದಾಯವು ಅವರ ಮರುಪಾವತಿ ಸಾಮರ್ಥ್ಯ ಸೂಚಿಸುತ್ತದೆ. ಅಲ್ಲದೇ ನಿಮ್ಮ ಕ್ರೆಡಿಟ್ ಹಿಸ್ಟರಿಯು ಹಣಕಾಸಿನ ವಿಷಯಗಳಲ್ಲಿ ನೀವು ಎಷ್ಟು ಜವಾಬ್ದಾರರಾಗಿರುತ್ತೀರಿ ಎಂಬುದನ್ನು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಆದಾಯವಿಲ್ಲದೆ ಕ್ರೆಡಿಟ್ ಕಾರ್ಡ್ ಪಡೆಯುವುದು ಕಷ್ಟಕರ. ಆದಾಗ್ಯೂ ಇದು ಅಸಾಧ್ಯವಲ್ಲ.
ಬ್ಯಾಂಕ್‌ಗಳು ಅಥವಾ ಇತರ ಕಾರ್ಡ್ ನೀಡುವ ಸಂಸ್ಥೆಗಳು ಅರ್ಜಿ ಸಲ್ಲಿಸುವ ಎಲ್ಲರಿಗೂ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಪ್ರಯತ್ನಿಸುತ್ತವೆ. ಆದರೆ, ಕಾರ್ಡ್ ಪಡೆದ ವ್ಯಕ್ತಿಗೆ ಮರುಪಾವತಿ ಮಾಡಲು ಸಾಧ್ಯವಾಗದ ಸ್ಥಿತಿ ಇದ್ದರೆ ಅಂಥ ಸಂದರ್ಭಗಳಲ್ಲಿ ಅವು ರಿಸ್ಕ್ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಏಕೆಂದರೆ ಇದು ಅವುಗಳ ವ್ಯವಹಾರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿಯೇ ಕಾರ್ಡುದಾರರು ಬಿಲ್ ಅನ್ನು ಹೇಗೆ ಪಾವತಿಸುತ್ತಾರೆ ಎಂಬುದನ್ನು ಬ್ಯಾಂಕುಗಳು ಸೂಕ್ಷ್ಮವಾಗಿ ಗಮನಿಸುತ್ತವೆ. ಅದರ ನಂತರವಷ್ಟೇ ಕಾರ್ಡ್ ನೀಡಲಾಗುತ್ತದೆ.
ನೀವು ಈ ಕೆಳಗಿನ ವಿಧಾನಗಳಲ್ಲಿ ಆದಾಯವಿಲ್ಲದೆ ಕ್ರೆಡಿಟ್ ಕಾರ್ಡ್ ಪಡೆಯಬಹುದು:
ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್: ಕೆಲವು ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಸಹ ನೀಡುತ್ತವೆ. ಆದರೆ, ಇದಕ್ಕೆ ಕಡಿಮೆ ಕ್ರೆಡಿಟ್ ಲಿಮಿಟ್ ಇರುತ್ತದೆ. ವಿದ್ಯಾರ್ಥಿಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ, ಇದಕ್ಕಾಗಿ ಏನಾದರೂ ಅಡಮಾನ ಇಡಬೇಕು. ಯಾವುದೇ ಅರೆಕಾಲಿಕ ಕೆಲಸ ತೋರಿಸಬೇಕು. ಇಲ್ಲದಿದ್ದರೆ ನಿಶ್ಚಿತ ಠೇವಣಿ ಮತ್ತು ಉಳಿತಾಯ ಖಾತೆಗಳನ್ನು ತೋರಿಸಿ ತೆಗೆದುಕೊಳ್ಳಬೇಕು. ಸಾಮಾನ್ಯ ಕ್ರೆಡಿಟ್ ಕಾರ್ಡ್‌ಗಳ ಎಲ್ಲ ಪ್ರಯೋಜನಗಳನ್ನು ವಿದ್ಯಾರ್ಥಿ ಕಾರ್ಡ್‌ಗಳು ಹೊಂದಿಲ್ಲ. ಪ್ರವೇಶ ಶುಲ್ಕಗಳು ಮತ್ತು ವಾರ್ಷಿಕ ಶುಲ್ಕಗಳು ತುಂಬಾ ಕಡಿಮೆ ಇರುತ್ತವೆ.
ಸ್ಥಿರ ಠೇವಣಿ ಮೇಲಿನ ಕಾರ್ಡ್: ಆದಾಯವಿಲ್ಲದ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲು ಬಯಸುವ ಹೆಚ್ಚಿನ ಜನರು ಸ್ಥಿರ ಠೇವಣಿ ಮೇಲೆ ಅವಲಂಬಿತರಾಗಿದ್ದಾರೆ. ನಿಶ್ಚಿತ ಠೇವಣಿ ಮೊತ್ತ ಅಡಮಾನವಿಟ್ಟು ಕಾರ್ಡ್ ತೆಗೆದುಕೊಳ್ಳಬಹುದು. ಇದನ್ನು ಸುರಕ್ಷಿತ ಕ್ರೆಡಿಟ್ ಕಾರ್ಡ್ ಎಂದು ಕರೆಯಲಾಗುತ್ತದೆ. FD ಮೊತ್ತದ 75-90 ಪ್ರತಿಶತವನ್ನು ಕ್ರೆಡಿಟ್ ಕಾರ್ಡ್ ಲಿಮಿಟ್ ಆಗಿ ನೀಡಲಾಗುತ್ತದೆ.
ಮ್ಯೂಚುವಲ್ ಫಂಡ್‌ಗಳ ಆಧಾರದ ಮೇಲೆ: ನಿಶ್ಚಿತ ಠೇವಣಿಯಂತೆಯೇ ಮ್ಯೂಚುವಲ್ ಫಂಡ್‌ಗಳ ಮೇಲೆ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬಹುದು. ಇದು ಸುರಕ್ಷಿತ ಕ್ರೆಡಿಟ್ ಕಾರ್ಡ್‌ನ ವ್ಯಾಪ್ತಿಯಲ್ಲಿ ಬರುತ್ತದೆ. ಬಿಲ್ ಪಾವತಿ ಮಾಡುವುದು ತಪ್ಪಿದಲ್ಲಿ ಬ್ಯಾಂಕ್ ಗಳು ಮ್ಯೂಚುವಲ್ ಫಂಡ್ನಿಂದ ಹಣ ಕಡಿತ ಮಾಡಬಹುದು.
ಬ್ಯಾಂಕ್ ಬ್ಯಾಲೆನ್ಸ್ ಮೇಲೆ ಕಾರ್ಡ್: ಕೆಲವು ಕಂಪನಿಗಳು ಬ್ಯಾಂಕ್ ಬ್ಯಾಲೆನ್ಸ್ ಆಧರಿಸಿ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. ಬ್ಯಾಂಕ್ ಖಾತೆಯಲ್ಲಿ ನಿಯಮಿತವಾಗಿ ಸಾಕಷ್ಟು ಹಣ ಇದೆ ಎಂಬ ಬಗ್ಗೆ ಪುರಾವೆಗಳನ್ನು ಸಲ್ಲಿಸಬೇಕು. ದೊಡ್ಡ ಪ್ರಮಾಣದ ವಹಿವಾಟುಗಳ ಮೂಲಕ ಖಾತೆಯು ನಿರಂತರವಾಗಿ ಹಣ ಹೊಂದಿತ್ತು ಎಂದು ತೋರಿಸಲು ಸಾಧ್ಯವಾಗುತ್ತದೆ. ಅಲ್ಲದೇ, ಸಾಲ, ಸಾಲದ ಅನುಪಾತವನ್ನು ಸರಿಯಾಗಿ ನಿರ್ವಹಿಸಬೇಕು. ಹೀಗಿದ್ದರೆ ಮಾತ್ರ ಸಂಸ್ಥೆಗಳು ಕಾರ್ಡ್ ನೀಡುತ್ತವೆ.
ಆಡ್ - ಆನ್ ಕಾರ್ಡ್: ಈಗಾಗಲೇ ಕ್ರೆಡಿಟ್ ಕಾರ್ಡ್ ಇದ್ದರೆ ಅದನ್ನು ಆಧರಿಸಿ ಕಂಪನಿಗಳು ಮತ್ತೊಂದು ಆಡ್ ಆನ್ ಕಾರ್ಡ್ ನೀಡುತ್ತವೆ. ಇದಕ್ಕಾಗಿ ಯಾವುದೇ ಆದಾಯ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಎರಡೂ ಬಹುತೇಕ ಒಂದೇ ರೀತಿಯ ಪ್ರಯೋಜನಗಳನ್ನು ಹೊಂದಿವೆ. ಕುಟುಂಬದ ಒಬ್ಬ ಸದಸ್ಯರು ಕಾರ್ಡ್ ಹೊಂದಿದ್ದರೆ ಮತ್ತು ಅವರ ಕ್ರೆಡಿಟ್ ಇತಿಹಾಸ ಉತ್ತಮವಾಗಿದ್ದರೆ, ಅವರು ಇನ್ನೊಬ್ಬರಿಗೆ ಆಡ್-ಆನ್ ಕಾರ್ಡ್ ಪಡೆಯಬಹುದು.
ಜಂಟಿ ಕ್ರೆಡಿಟ್ ಕಾರ್ಡ್: ಬ್ಯಾಂಕ್‌ನಲ್ಲಿ ಜಂಟಿ ಖಾತೆಯಂತೆ ನೀವು ಕ್ರೆಡಿಟ್ ಕಾರ್ಡ್ ಸಹ ಪಡೆಯಬಹುದು. ಸಹ-ಅರ್ಜಿದಾರರ ಆದಾಯ ದಾಖಲೆಗಳು ಕಾರ್ಡ್ ವಿತರಣೆಗೆ ಅರ್ಹವಾಗಿದ್ದರೆ ಸಾಕು. ವ್ಯಕ್ತಿಯ ಕೈಗೆಟುಕುವಿಕೆಯ ಆಧಾರದ ಮೇಲೆ ಜಂಟಿ ಕಾರ್ಡ್ ನೀಡಲಾಗುತ್ತದೆ.
ಇದನ್ನೂ ಓದಿ: ಬೈ ನೌ ಪೇ ಲೇಟರ್ ಅಥವಾ ಕ್ರೆಡಿಟ್ ಕಾರ್ಡ್ - ಯಾವುದು ಬೆಸ್ಟ್?