ಮುಂಬೈ: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿರುವ ಭಾರತೀಯ ಬಿಲಿಯನೇರ್ ಉದ್ಯಮಿ ಅದಾನಿ, ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಅವರ ಷೇರುಗಳ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡುಬಂದ ಬೆನ್ನಲ್ಲೇ ಅವರಿಗೆ ಹೊಸ ಪಟ್ಟ ಸಿಕ್ಕಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಫ್ರಾನ್ಸ್‌ನ ಉದ್ಯಮಿ ಎಲ್ವಿಎಂಎಚ್ ಮುಖ್ಯಸ್ಥ ಬರ್ನಾರ್ಡ್ ಅರ್ನಾಲ್ಡ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದ ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ ಇದೀಗ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಂಕಿ-ಅಂಶಗಳ ಪ್ರಕಾರ ಅದಾನಿ ಸಮೂಹದ ಕಂಪನಿಗಳ ಷೇರು ಬೆಲೆಗಳು ಶುಕ್ರವಾರ ಏರಿಕೆಯಾದ ನಂತರ ಅವರ ಸಂಪತ್ತು 5.5 ಬಿಲಿಯನ್ ಡಾಲರ್ ಅಥವಾ ಶೇ. 3.64ರಷ್ಟು ಜಿಗಿದಿದೆ. ಹೀಗಾಗಿ ನಿರೀಕ್ಷೆಯಂತೆ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ: ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಡ್ ಹಿಂದಿಕ್ಕಿದ ಗೌತಮ್ ಅದಾನಿ ವಿಶ್ವದ ಮೂರನೇ ಸಿರಿವಂತ ವ್ಯಕ್ತಿ
ಅದಾನಿ ನಿವ್ವಳ ಆಸ್ತಿ ಈಗ 154.7 ಬಿಲಿಯನ್ ಡಾಲರ್ ತಲುಪಿದೆ ಎಂದು ಫೋರ್ಬ್ಸ್ ಮಾಹಿತಿ ಹಂಚಿಕೊಂಡಿದೆ. ಸದ್ಯ ವಿಶ್ವದ ಶ್ರೀಮಂತರ ಸಾಲಿನಲ್ಲಿ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದು, ಅವರ ಒಟ್ಟು ಆಸ್ತಿ 273.5 ಬಿಲಿಯನ್ ಆಗಿದೆ. ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ 92 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದು, 8ನೇ ಸ್ಥಾನದಲ್ಲಿದ್ದಾರೆ.
ಶರವೇಗದಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ಅದಾನಿ ಗ್ರೂಪ್ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಕಳೆದ ಕೆಲ ತಿಂಗಳ ಹಿಂದೆ 5ಜಿ ತರಂಗಾಂತರ ಸಹ ಖರೀದಿ ಮಾಡಿದ್ದಾರೆ. ಏಷ್ಯಾದ ವ್ಯಕ್ತಿಯೊಬ್ಬರು ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಮೊದಲ ಮೂವರಲ್ಲಿ ಸ್ಥಾನ ಪಡೆದಿದ್ದು ಇದೇ ಮೊದಲು.