ಬಿರ್ಕೂರ್ (ತೆಲಂಗಾಣ): ಪಡಿತರ ಅಂಗಡಿಗಳಲ್ಲಿ ವಿತರಿಸಲಾಗುವ ಅಕ್ಕಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪಾಲೆಷ್ಟು ಎಂಬುದು ಗೊತ್ತಿಲ್ಲದ ಕಾರಣಕ್ಕೆ ಜಿಲ್ಲಾಧಿಕಾರಿಯೊಬ್ಬರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಜಹೀರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬಿಜೆಪಿಯ ಲೋಕಸಭಾ ಪ್ರವಾಸ್ ಯೋಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು, ಒಂದು ರೂಪಾಯಿ ಕೆಜಿ ದರದಲ್ಲಿ ನೀಡುವ ಪಡಿತರದಲ್ಲಿ ಕೇಂದ್ರ ಸರ್ಕಾರದ ಸಿಂಹ ಪಾಲಿದ್ದರೂ, ಬಿರ್ಕೂರ್ನ ಪಡಿತರ ಅಂಗಡಿಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರ ಯಾಕೆ ಹಾಕಿಲ್ಲ ಎಂದು ಜಿಲ್ಲಾಧಿಕಾರಿಗೆ ಪ್ರಶ್ನಿಸಿದರು.
ಮುಕ್ತ ಮಾರುಕಟ್ಟೆಯಲ್ಲಿ 35 ರೂಪಾಯಿಗೆ ಮಾರಾಟವಾಗುವ ಅಕ್ಕಿಯನ್ನು ಇಲ್ಲಿ 1 ರೂಪಾಯಿಗೆ ವಿತರಿಸಲಾಗುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರ ಎಷ್ಟು ವೆಚ್ಚ ಭರಿಸುತ್ತಿದೆ ಎಂದು ಜಿಲ್ಲಾಧಿಕಾರಿಯನ್ನು ಸಚಿವರು ಪ್ರಶ್ನಿಸಿದರು. ಲಾಜಿಸ್ಟಿಕ್ಸ್ ಮತ್ತು ಸಂಗ್ರಹಣೆ ಸೇರಿದಂತೆ ಎಲ್ಲ ವೆಚ್ಚಗಳನ್ನು ಭರಿಸಿ ಕೇಂದ್ರವು ಪಡಿತರ ಅಂಗಡಿಗಳಲ್ಲಿ ಅಕ್ಕಿ ಸರಬರಾಜು ಮಾಡುತ್ತಿದೆ ಮತ್ತು ಉಚಿತ ಅಕ್ಕಿ ಜನರಿಗೆ ತಲುಪುತ್ತಿದೆಯೇ ಅಥವಾ ಇಲ್ಲವೇ ಎಂಬ ಉತ್ತರವನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರವು ಅಂದಾಜು 30 ರೂಪಾಯಿ ಹಾಗೂ ರಾಜ್ಯ ಸರ್ಕಾರ 4 ರೂಪಾಯಿ ಭರಿಸುತ್ತದೆ. ಇನ್ನು ಫಲಾನುಭವಿಯಿಂದ ಒಂದು ರೂಪಾಯಿ ಪಡೆಯಲಾಗುತ್ತಿದೆ. ಮಾರ್ಚ್- ಏಪ್ರಿಲ್ 2020 ರಿಂದ 30 ರಿಂದ 35 ರೂಪಾಯಿ ದರದ ಅಕ್ಕಿಯನ್ನು ಕೇಂದ್ರ ಸರ್ಕಾರವು ಸಂಪೂರ್ಣ ಉಚಿತವಾಗಿ ಫಲಾನುಭವಿಗಳಿಗಾಗಿ ನೀಡುತ್ತಿದೆ ಎಂಬುದನ್ನು ಸಚಿವೆ ನಿರ್ಮಲಾ ಸೀತಾರಾಮನ್ ಎತ್ತಿ ತೋರಿಸಿದರು.
"NFSA ಅಡಿಯಲ್ಲಿ, ಆಹಾರ ಧಾನ್ಯಗಳ ವೆಚ್ಚದ ಶೇಕಡಾ 80 ಕ್ಕಿಂತ ಹೆಚ್ಚು ಹಣವನ್ನು ಮೋದಿ ಸರ್ಕಾರ ಭರಿಸುತ್ತಿದೆ. ಪಡಿತರ ಅಂಗಡಿಗಳಲ್ಲಿ ಪ್ರಧಾನಿ ಮೋದಿಯವರ ಪೋಸ್ಟರ್ ಹಾಗೂ ಬ್ಯಾನರ್ ಪ್ರದರ್ಶಿಸಲು ಏನಾದರೂ ಸಮಸ್ಯೆ ಇದೆಯೇ? ಎಂದು ಸಚಿವರ ಕಚೇರಿಯು ಟ್ವೀಟ್ ಮಾಡಿದೆ. ಇದಕ್ಕೂ ಮುನ್ನ ಹಣಕಾಸು ಸಚಿವರು ಬಾನ್ಸವಾಡಕ್ಕೆ ತೆರಳುತ್ತಿದ್ದಾಗ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಯತ್ನಿಸಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಗುಂಪನ್ನು ಚದುರಿಸಿದರು.