ನವದೆಹಲಿ: ಟನ್ಗೆ 1200 ಡಾಲರ್ಗಿಂತ ಕಡಿಮೆ ದರದಲ್ಲಿ ಬಾಸ್ಮತಿ ಅಕ್ಕಿಯ ರಫ್ತಿಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರಕಾರ ಭಾನುವಾರ ತಿಳಿಸಿದೆ. ಪ್ರೀಮಿಯಂ ಬಾಸ್ಮತಿ ಅಕ್ಕಿಯ ರೂಪದಲ್ಲಿ ಬಿಳಿ ಬಾಸ್ಮತಿ ಅಲ್ಲದ ಅಕ್ಕಿಯ ಅಕ್ರಮ ರಫ್ತು ನಿರ್ಬಂಧಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಪ್ರತಿ ಟನ್ಗೆ 1,200 ಡಾಲರ್ಗಿಂತ ಕಡಿಮೆ ದರದ ಒಪ್ಪಂದಗಳನ್ನು ನೋಂದಾಯಿಸದಂತೆ ವ್ಯಾಪಾರ ಉತ್ತೇಜನ ಸಂಸ್ಥೆ ಎಪಿಇಡಿಎಗೆ ನಿರ್ದೇಶನ ನೀಡಲಾಗಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತುತ ಪ್ರತಿ ಟನ್ಗೆ 1,200 ಡಾಲರ್ಗಿಂತ ಕಡಿಮೆ ಇರುವ ಒಪ್ಪಂದಗಳನ್ನು ತಡೆಹಿಡಿಯಲಾಗಿದೆ. ಈ ಬಗ್ಗೆ ಮುಂದಿನ ಕ್ರಮವನ್ನು ಮೌಲ್ಯಮಾಪನ ಮಾಡಲು ಎಪಿಇಡಿಎ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. ಈ ವರ್ಷದ ಜುಲೈ 20 ರಂದು ಭಾರತವು ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಿತ್ತು.
"2023ರ ಜುಲೈ 20 ರಿಂದ ರಫ್ತು ನಿಷೇಧಿಸಲಾಗಿರುವ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಪ್ಪಾಗಿ ಬಿಂಬಿಸುವುದು ಮತ್ತು ಈ ಮೂಲಕ ಅಕ್ರಮ ರಫ್ತು ನಡೆಯುತ್ತಿರುವ ಬಗ್ಗೆ ಸರ್ಕಾರಕ್ಕೆ ವಿಶ್ವಾಸಾರ್ಹ ವರದಿಗಳು ಬಂದಿವೆ. ಪಾರ್ಬಾಯಿಲ್ಡ್ ಅಕ್ಕಿ ಮತ್ತು ಬಾಸ್ಮತಿ ಅಕ್ಕಿಯ ಎಚ್ಎಸ್ ಕೋಡ್ ಅಡಿಯಲ್ಲಿ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲಾಗುತ್ತಿರುವ ಬಗ್ಗೆ ತಿಳಿದು ಬಂದಿದೆ" ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ)ವು ಬಾಸ್ಮತಿ ಅಕ್ಕಿಯ ರಫ್ತನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿರುವುದರಿಂದ ಮತ್ತು ಈಗಾಗಲೇ ಅದು ಈ ಉದ್ದೇಶಕ್ಕಾಗಿ ವೆಬ್ ಆಧಾರಿತ ವ್ಯವಸ್ಥೆಯನ್ನು ಹೊಂದಿರುವುದರಿಂದ, ಬಾಸ್ಮತಿ ಅಕ್ಕಿಯ ಸೋಗಿನಲ್ಲಿ ಬಿಳಿ ಬಾಸ್ಮತಿ ಅಲ್ಲದ ಅಕ್ಕಿಯ ಅಕ್ರಮ ರಫ್ತುಗಳನ್ನು ತಡೆಗಟ್ಟಲು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಎಪಿಇಡಿಎಗೆ ಸೂಚನೆಗಳನ್ನು ನೀಡಿದೆ.
"ಪ್ರತಿ ಮೆಟ್ರಿಕ್ ಟನ್ಗೆ 1,200 ಡಾಲರ್ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಬಾಸ್ಮತಿ ರಫ್ತುಗಳ ಒಪ್ಪಂದಗಳನ್ನು ಮಾತ್ರ ನೋಂದಣಿ ಮತ್ತು ಹಂಚಿಕೆ ಪ್ರಮಾಣಪತ್ರ (ಆರ್ಸಿಎಸಿ) ವಿತರಣೆಗಾಗಿ ನೋಂದಾಯಿಸಬೇಕು. ಪ್ರತಿ ಮೆಟ್ರಿಕ್ ಟನ್ಗೆ 1,200 ಡಾಲರ್ಗಿಂತ ಕಡಿಮೆ ಮೌಲ್ಯದ ಒಪ್ಪಂದಗಳನ್ನು ತಡೆಹಿಡಿಯಬಹುದು ಮತ್ತು ಬೆಲೆಗಳಲ್ಲಿನ ವ್ಯತ್ಯಾಸವನ್ನು ತಿಳಿಯಲು ಎಪಿಇಡಿಎ ಅಧ್ಯಕ್ಷರು ರಚಿಸಲಿರುವ ಸಮಿತಿಯು ಮೌಲ್ಯಮಾಪನ ಮಾಡಬಹುದು" ಎಂದು ಕೇಂದ್ರ ಸರ್ಕಾರದ ಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಸಕ್ತ ತಿಂಗಳಲ್ಲಿ ಪ್ರತಿ ಮೆಟ್ರಿಕ್ ಟನ್ ಬಾಸ್ಮತಿ ಅಕ್ಕಿಯ ಸರಾಸರಿ ರಫ್ತು ಬೆಲೆ 1214 ಡಾಲರ್ ಆಗಿದ್ದರೂ, ಪ್ರತಿ ಮೆಟ್ರಿಕ್ ಟನ್ಗೆ ಕನಿಷ್ಠ 359 ಡಾಲರ್ನಂತೆ ವ್ಯಾಪಾರ ಒಪ್ಪಂದಗಳು ನಡೆಯುತ್ತಿರುವುದು ಕಂಡು ಬಂದಿವೆ. ಹೀಗಾಗಿ ರಫ್ತು ಮಾಡಲಾಗುತ್ತಿರುವ ಬಾಸ್ಮತಿಯ ಗುತ್ತಿಗೆ ಬೆಲೆಗಳಲ್ಲಿ ದೊಡ್ಡ ವ್ಯತ್ಯಾಸ ಕಾಣಿಸುತ್ತಿವೆ ಎಂದು ಅದು ಹೇಳಿದೆ. ಸಮಿತಿಯು ಒಂದು ತಿಂಗಳ ಅವಧಿಯಲ್ಲಿ ತನ್ನ ವರದಿಯನ್ನು ಸಲ್ಲಿಸಬೇಕು. ನಂತರ ಉದ್ಯಮವು ಯೋಜಿಸಿರುವಂತೆ ಕಡಿಮೆ ಬೆಲೆಯಲ್ಲಿ ಬಾಸ್ಮತಿಯ ರಫ್ತಿನ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅದು ಹೇಳಿದೆ.
ಇದನ್ನೂ ಓದಿ : ಅದಾನಿ-ಹಿಂಡೆನ್ಬರ್ಗ್ ಪ್ರಕರಣ: 24ರಲ್ಲಿ 22 ತನಿಖಾ ವರದಿ ಪೂರ್ಣ- ಸುಪ್ರೀಂ ಕೋರ್ಟ್ಗೆ ತಿಳಿಸಿದ ಸೆಬಿ