ಮುಂಬೈ: ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ? ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ? ಎಂಬ ರೂಪಕದಂತಿದೆ ಸಂಸ್ಕೃತಿಯ ಸಾರವಾದ ದೀಪಾವಳಿ ಹಬ್ಬಕ್ಕೂ ಮುಂಬೈ ಷೇರುಪೇಟೆಗೂ..
ದೇಶಾದ್ಯಂತ ಬೆಳಕಿನ ಹಬ್ಬವಾದ ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಹಣ ಖರ್ಚು ಮಾಡಿ ಸಂಪಾದಿಸುವುದು ಮಂಗಳಕರವೆಂಬ ತಲೆಮಾರುಗಳ ನಂಬಿಕೆ ಆಳವಾಗಿ ಬೇರೂರಿದೆ. ಇದನ್ನೇ ದೃಷ್ಟಿಯಲ್ಲಿರಿಸಿಕೊಂಡು ಮುಂಬೈ ಮಾರುಕಟ್ಟೆಯಲ್ಲಿ ವಿಶೇಷ ವಹಿವಾಟು ಅಂದರೆ 'ಮುಹೂರ್ತ ಟ್ರೇಡಿಂಗ್' ನಡೆಸಲಾಗುತ್ತದೆ.
ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ವಹಿವಾಟು ಸ್ಥಗಿತಿಗೊಳಿಸುವ ಷೇರುಪೇಟೆ ಮುಹೂರ್ತ ಟ್ರೇಡಿಂಗ್ಗಾಗಿ ಇಂದು ಸಂಜೆ ತೆರೆದುಕೊಳ್ಳಲಿದೆ. ಈ ವೇಳೆ ಹೂಡಿಕೆದಾರರು ದೀರ್ಘಕಾಲಕ್ಕಾಗಿ ಷೇರುಗಳನ್ನು ಖರೀದಿಸುತ್ತಾರೆ. ಮುಂಬೈ ಷೇರು ಮಾರುಕಟ್ಟೆಯ ಬಿಎಸ್ಇ ಹಾಗೂ ಎನ್ಎಸ್ಇ ಸಂಜೆ 6.15ರಿಂದ 7.15ರವರೆಗೆ ವಿಶೇಷ ಟ್ರೇಡಿಂಗ್ಗಾಗಿ ತೆರೆದುಕೊಳ್ಳುತ್ತಿವೆ. ಹಿಂದೂ ಪಂಚಾಂಗ ಸಂವತ್ಸರ 2075 ಕೊನೆಗೊಂಡು ಇಂದಿನಿಂದ 2076 ಸಂವತ್ಸರ ಆರಂಭವಾಗಲಿದೆ. ಇಂತಹ ಸಮಯದಲ್ಲಿ ಹಣ ಹೂಡಿಕೆ ಮಾಡಿದರೆ ವರ್ಷಪೂರ್ತಿ ಉತ್ತಮ ಲಾಭಗಳಿಸಬಹುದು ಎಂಬುದು ಹೂಡಿಕೆದಾರರ ಪ್ರತೀತಿ.