ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇಂದು ತೆಗೆದುಕೊಂಡ ಮಹತ್ವದ ನಿರ್ಧಾರಗಳು ಷೇರು ಮಾರುಕಟ್ಟೆಯನ್ನು ಹುರಿದುಂಬಿಸಿದ್ದು, ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಎಂ-ಕ್ಯಾಪಿಟಲ್ ಮೊತ್ತ ರೂ. ₹ 1,45,000 ಕೋಟಿಯಿಂದ ₹ 7 ಲಕ್ಷ ಕೋಟಿಯಷ್ಟಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗೋವಾದ ಪಣಜಿಯಲ್ಲಿ ನಡೆದ 37ನೇ ಜಿಎಸ್ಟಿ ಮಂಡಳಿ ಸಭೆಯ ಬಳಿಕ ಕಾರ್ಪೊರೇಟ್ ಮೇಲಿನ ತೆರಿಗೆ ಹೊರೆ ಕಡಿತ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಖರ್ಚಿಗೆ ವಿನಾಯಿತಿ ನೀಡುವುದಾಗಿ ಪ್ರಕಟಿಸಿದರು. ತೆರಿಗೆಗೆ ಸಂಬಂಧಿಸಿದ ಕ್ರಮಗಳಿಗೆ ಸಂಸತ್ತಿನಿಂದ ಅನುಮೋದನೆ ಬೇಕಾಗಿದ್ದು, ಸುಗ್ರೀವಾಜ್ಞೆಯ ಮೂಲಕ ನಿರ್ಧಾರವನ್ನು ಜಾರಿಗೆ ತರುವ ಸುಳಿವು ನೀಡಿದ್ದಾರೆ.
ಮಹತ್ವದ ನಿರ್ಣಯ ಹೊರಬೀಳುವ ಮುನ್ಸೂಚನೆ ದಿನದ ಆರಂಭಿಕ ವಹಿವಾಟಿನಲ್ಲಿ ಸಿಕ್ಕಿರಬಹುದು. ಹಾಗಾಗಿ ಇವತ್ತು ಷೇರುಪೇಟೆಯು ಆರಂಭಿಕ ವಹಿವಾಟು ಏರುಗತಿಯಲ್ಲೇ ಸಾಗಿತ್ತು. ಅಂತಿಮವಾಗಿ ಬಿಎಸ್‌ಇ ಸೆನ್ಸೆಕ್ಸ್ 1,921.15 ಅಂಶಗಳ ಏರಿಕೆ ದಾಖಲಿಸಿತು. ಇದು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಒಂದೇ ದಿನ ಗರಿಷ್ಠ ಏರಿಕೆ ದಾಖಲಿಸಿದ ವಹಿವಾಟಿನ ದಿನವಾಗಿದೆ.
ಬಿಎಸ್‌ಇ ಪಟ್ಟಿ ಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯಯು ಇಂದಿನ ವಹಿವಾಟಿನ ಅವಧಿಯಲ್ಲಿ ( ಬೆಳಿಗ್ಗೆ 9:15 ರಿಂದ ಮಧ್ಯಾಹ್ನ 03:30 ವರೆಗೆ ಆರು ಗಂಟೆ 30 ನಿಮಿಷದ ಅವಧಿಯ ನಡುವೆ ) ₹ 6,82,938.6 ಕೋಟಿಯಷ್ಟು ವೃದ್ಧಿಯಾಗಿದೆ. ನಿನ್ನೆಯ ₹ 1,45,37,378.01 ಸಂಪತ್ತು ಇಂದು ₹ 7 ಲಕ್ಷ ಕೋಟಿಗೆ ತಲುಪಿದೆ.