ಮುಂಬೈ: ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕವು ಗುರುವಾರದಂದು ಕಳೆದ ಐದು ತಿಂಗಳಲ್ಲಿನ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿತ ದಾಖಲಿಸಿದೆ.
ದಿನದ ಆರಂಭಿಕ ವಹಿವಾಟಿನಿಂದ ನಕಾರಾತ್ಮಕವಾಗಿ ಸಾಗಿದೆ ಮುಂಬೈ ಪೇಟೆ ಚೇತರಿಸಿಕೊಳ್ಳಲಿಲ್ಲ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 138 ಅಂಶಗಳ ಕುಸಿದು 10,980 ಅಂಶಗಳ ಮಟ್ಟದಲ್ಲೂ ಹಾಗೂ ಮುಂಬೈ ಸಂವೇದಿ ಸೂಚ್ಯಂಕ ದಿನದ ಮಧ್ಯಂತರ ಅವಧಿಯಲ್ಲಿ ಸೆನ್ಸೆಕ್ಸ್ 787 ಅಂಶಗಳ ಕುಸಿತ ಕಂಡಿತು. ಬಳಿಕ ಅಲ್ಪ ಚೇತರಿಸಿಕೊಂಡು ಇಳಿಕೆಯ ಪ್ರಮಾಣ 468.80 ಅಂಶಕ್ಕೆ ತಲುಪಿ 37,018 ಅಂಕಗಳಲ್ಲಿ ನಿರಾಸದಾಯಕ ಅಂತ್ಯಕಂಡಿದೆ.
ನಿನ್ನೆ ಸರ್ಕಾರದ ಅಧಿಕೃತ ಅಂಕಿ - ಅಂಶಗಳು ದೇಶದ ಪ್ರಮುಖ ಎಂಟು ಕೈಗಾರಿಕಾ ಕ್ಷೇತ್ರಗಳ ಬೆಳವಣಿಗೆ ದರ ಕ್ಷೀಣಿಸುತ್ತಿದೆ ಎಂದು ಹೇಳಿವೆ. ಜೊತೆಗೆ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಕ್ರಿಸ್ಸಿಲ್, ಭಾರತದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಈ ಹಣಕಾಸು ವರ್ಷದಲ್ಲಿ 20 ಬೇಸಿಸ್ ಪಾಯಿಂಟ್ ಕಡಿತಗೊಳಿಸಿ ಶೇ 6.9ಕ್ಕೆ ಇಳಿಸಿದೆ. ದುರ್ಬಲ ಮಾನ್ಸೂನ್ ಮತ್ತು ನಿಧಾನಗತಿಯ ಜಾಗತಿಕ ಬೆಳವಣಿಗೆ ಪೇಟೆಯ ಮೇಲೆ ನೇರ ಪರಿಣಾಮ ಬೀರಿದೆ.
2019-20ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಹಣಕಾಸಿನ ಕೊರತೆ 4.32 ಲಕ್ಷ ಕೋಟಿ ರೂ.ಗಳಿಗೆ ಅಥವಾ ಬಜೆಟ್ ಗುರಿಯ ಶೇ 61.4ಕ್ಕೆ ಏರಿದೆ. ಹಣಕಾಸಿನ ಕೊರತೆಯು ಸರ್ಕಾರದ ಗಳಿಕೆ ಮತ್ತು ಖರ್ಚಿನ ನಡುವಿನ ವ್ಯತ್ಯಾಸವಾಗಿದೆ. ಅಮೆರಿಕದ ಸೆಂಟ್ರಲ್ ಬ್ಯಾಂಕ್ ದಶಕದ ಬಳಿಕ ತನ್ನ ಬಡ್ಡಿದರದಲ್ಲಿ ಮೊದಲ ಬಾರಿಗೆ ಬುಧವಾರ ಕಡಿತಗೊಳಿಸಿತು. ಈ ಎಲ್ಲ ಬೆಳವಣಿಗೆಗಳು ಪೇಟೆಯಲ್ಲಿನ ಹೂಡಿಕೆದಾರರನ್ನು ನಿರಾಸೆಗೊಳಿಸಿತು.