ನವದೆಹಲಿ: ಲಾಭದಾಯಕವಾದ ಚಿಲ್ಲರೆ ಇಂಧನ ಮಾರಾಟವು ಕೆಲವು ಪ್ರಮುಖ ಸುಧಾರಣೆಗಳೊಂದಿಗೆ ಗ್ರಾಹಕರಿಗೆ ಇನ್ನೂ ಹತ್ತಿರವಾಗಬೇಕಿದೆ. ಇಂಧನ ಮಾರಾಟದಲ್ಲಿ ಅಸ್ತಿತ್ವದಲ್ಲಿರುವ ದಶಕದ ಹಿಂದಿನ ನಿರ್ಬಂಧಗಳನ್ನು ಸಡಿಲಗೊಳಿಸುವ ಪ್ರಸ್ತಾವನೆಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಿದ್ಧಪಡಿಸಿದೆ.
ಉದ್ದೇಶಿತ ಪ್ರಸ್ತಾವನೆಯನ್ನು ಪ್ರಧಾನಿ ಮೋದಿ ಸರ್ಕಾರದ ಸಚಿವ ಸಂಪುಟ ಅನುಮೋದನೆಗೊಳಿಸಿದರೆ ಶೀಘ್ರದಲ್ಲೇ ಸೂಪರ್ ಮಾರ್ಕೆಟ್, ಶಾಪಿಂಗ್ ಮಾಲ್ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದೊರೆಯಲಿದೆ. ಮಲ್ಟಿ- ಬ್ರ್ಯಾಂಡ್ನ ಚಿಲ್ಲರೆ ಮಳಿಗೆಗಳಾದ ಫ್ಯೂಚರ್ ಗ್ರೂಪ್, ರಿಲಯನ್ಸ್ ರಿಟೇಲ್, ಸೌದಿ ಅರಾಮ್ಕೊ, ಟೋಟಲ್ ಮತ್ತು ಟ್ರಾಫಿಗುರಾ ನಂತಹ ವಾಣಿಜ್ಯ ಮಳಿಗೆಗಳು ಆರಂಭಿಕ ಹಂತದಲ್ಲಿ ಜಾರಿಗೊಳಿಸಲು ಸನ್ನದ್ಧವಾಗಿವೆ.
ಪೆಟ್ರೋಲಿಯಂ ಸಚಿವಾಲಯವು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಇರುವಂತಹ ಅಡೆತಡೆ ನಿವಾರಣೆ ಮಾಡಲು ಸಚಿವ ಸಂಪುಟದ ಸಭೆಯಲ್ಲಿ ಅನುಮತಿ ಪಡೆಯಬೇಕಿದೆ. ಪೆಟ್ರೋಲ್ ಪಂಪ್ ಹೊರತಾಗಿಯೂ ಬೇರೆ ಬೇರೆ ಕಡೆಗಳಲ್ಲೂ ಸಿಗುವಂತೆ ಆಗಬೇಕು ಎನ್ನುವುದೇ ಸರ್ಕಾರದ ಯೋಜನೆಯಾಗಿದೆ.
ಎರಡು ದಶಕಕ್ಕೂ ಹಳೆಯದಾದ ನಿಯಮಗಳನ್ನು ರದ್ದುಪಡಿಸಿ ಪೆಟ್ರೋಲ್, ಡೀಸೆಲ್ ಮತ್ತು ಜೆಟ್ ಇಂಧನದ ಮೇಲೆ ಹೂಡಿಕೆ ಮಾಡಿದ ಕಂಪನಿಗಳಿಗೆ ಮಾರುಕಟ್ಟೆಯ ಪರವಾನಗಿ ನಿರ್ಬಂಧಗಳನ್ನು ಸಡಿಲಗೊಳಿಸಬೇಕಿದೆ ಎಂದು ಸಚಿವಾಲಯ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಇಂಧನ ಪರಿಶೋಧನೆ ಮತ್ತು ಉತ್ಪಾದನೆ, ಸಂಸ್ಕರಣೆ, ಪೈಪ್‌ಲೈನ್ ಹಾಗೂ ಟರ್ಮಿನಲ್‌ಗಳಿಗೆ ಅಂದಾಜು 2,000 ಕೋಟಿ ರೂ.ನಷ್ಟು ಹೂಡಿಕೆ ಮಾಡಲಾಗಿದೆ. ವೇಗವಾಗಿ ವಿಸ್ತರಿಸುತ್ತಿರುವ ಇಂಧನ ಮಾರುಕಟ್ಟೆಯ ಪಾಲು ಪಡೆದುಕೊಳ್ಳುವ ಬಯಸುವ ಕಂಪನಿಗಳಿಗೆ ಹಳೆಯ ನೀತಿಗಳು ದೀರ್ಘಕಾಲದಿಂದ ತಡೆಯೊಡ್ಡುತ್ತಿವೆ. ಕಳೆದ ಹಣಕಾಸು ವರ್ಷದಲ್ಲಿ ಪೆಟ್ರೋಲ್ ಬೇಡಿಕೆ ಶೇ 8ರಷ್ಟು ಏರಿಕೆಯಾದರೆ, ಡೀಸೆಲ್ ಮತ್ತು ಜೆಟ್ ಇಂಧನ ಕ್ರಮವಾಗಿ ಶೇ 3ರಷ್ಟು ಮತ್ತು 9ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ.