ವಿಜಯಪುರ: ಕೋವಿಡ್ ನಿಯಮ ಪಾಲನೆ ಮಾಡಿ ಗಣೇಶ ಹಬ್ಬವನ್ನು ಆಚರಣೆ ಮಾಡಬೇಕೆಂದು ಮುಖ್ಯಮಂತ್ರಿ ಘೋಷಣೆ ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ನಿಂದ ಗಣೇಶ ಹಬ್ಬಕ್ಕೆ ತೊಂದರೆ ಆಗಬಾರದು ಎಂಬ ವಿಚಾರ ಸರ್ಕಾರದ ಗಮನಕ್ಕಿದೆ. ಹಾಗಾಗಿ ಕೋವಿಡ್ ನಿಯಮ ಪಾಲನೆ ಮಾಡಿ ಗಣೇಶ ಉತ್ಸವ ಆಚರಣೆ ಮಾಡುವಂತೆ ನಾನು ಸಹ ವಿನಂತಿಸುತ್ತೇನೆ ಎಂದರು.
ಸಿಂದಗಿ ಠಾಣೆಯಲ್ಲಿ ಆರೋಪಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಆರೋಪಿ ಮೇಲೆ ಪೋಕ್ಸೊ ಕಾಯ್ದೆಯಲ್ಲಿ ಕೇಸ್ ದಾಖಲಾಗಿತ್ತು. ಆ ಪ್ರಕರಣದಲ್ಲಿ ಐವರನ್ನು ಅಮಾನತು ಮಾಡಿರುವ ವಿಚಾರ ನನಗೆ ಗೊತ್ತಿಲ್ಲ ಎಂದರು. ಎಸ್ಪಿ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಕ್ಯಾನ್ಸರ್ ಪೀಡಿತ ಮುಸ್ಲಿಂ ಮಹಿಳೆಗೆ 1 ಲಕ್ಷ ರೂ ಸಹಾಯಧನ
ಮುಸ್ಲಿಂ ಮಹಿಳೆಯರಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಒಂದು ಲಕ್ಷ ರೂಪಾಯಿ ಸಹಾಯ ಧನ ನೀಡಿರುವ ವಿಚಾರವಾಗಿ ಎಲ್ಲರೂ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಹಜ್ ಮತ್ತು ವಕ್ಫ್ ಇಲಾಖೆಯಲ್ಲಿ 2009ರಲ್ಲಿ ಈ ಆದೇಶ ಜಾರಿಯಾಗಿದೆ. ಅಂದು ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದರೆ ಅವರಿಗೆ ಒಂದು ಲಕ್ಷ ರೂಪಾಯಿ ನೀಡಲು ತೀರ್ಮಾನಿಸಲಾಗಿತ್ತು ಅದು ಇಲ್ಲಿವರೆಗೂ ಯಾರಿಗೂ ಗೊತ್ತಿರಲಿಲ್ಲ. ನಾನು ಕೇವಲ ಆ ಯೋಜನೆ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದೇನೆ. ನಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ನನ್ನ ಇಲಾಖೆ ಬಗ್ಗೆ ಮಾಹಿತಿ ನೀಡುವಾಗ ಅದರ ಬಗ್ಗೆ ಹೇಳಿದ್ದೇನೆ. ಅದು ನಾನು ಘೋಷಣೆ ಮಾಡಿದ ಯೋಜನೆ ಅಲ್ಲ ಎಂದು ತಿಳಿಸಿದರು.
ನಮಗೆ ಮುಸ್ಲಿಂ-ಹಿಂದೂ ಎಂಬ ಭೇದ-ಭಾವ ಇಲ್ಲ. ಸಿಎಂ ಪರಿಹಾರ ನಿಧಿ ಹಾಗೂ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಎಲ್ಲರಿಗೂ ಪರಿಹಾರ ನೀಡಲಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳಿಗೂ ಹಲವು ಯೋಜನೆಗಳ ಮೂಲಕ ಪರಿಹಾರ ನೀಡಲಾಗುತ್ತಿದೆ ಎಂದರು.